ಪಾಟೀಲ ಮನೆತನದ ಜನಸೇವೆ ಶ್ಲಾಘನೀಯ: ವೈಜಿನಾಥ ಕಾಂಬಳೆ

ಬೀದರ:ಮಾ.25: ಗಾದಗಿ ಪಾಟೀಲ ಮನೆತನದ ಸೇವೆ ಮತ್ತು ಕಾರ್ಯ ಶ್ಲಾಘನೀಯವಾಗಿದೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ವಿಜಯಕುಮಾರ ಪಾಟೀಲ, ಸೋಮಶೇಖರ ಪಾಟೀಲ ಹಾಗೂ ಚಂದ್ರಶೇಖರ ಪಾಟೀಲ ಗಾದಗಿ ಅವರು ಮರಖಲ್ ಗ್ರಾಮದ ಜನರ ಉಚಿತ ಆರೋಗ್ಯ ತಪಾಸಣೆ ಮಾಡುತ್ತಿರುವುದು ಶ್ಲಾಘನೀಯ. ಜನರ ಆರೋಗ್ಯದ ಜೊತೆಗೆ ಗ್ರಾಮದಲ್ಲಿ ಅನೇಕ ಪ್ರಗತಿಪರ ಕಾರ್ಯಗಳನ್ನು ವಿಜಯಕುಮಾರ ಪಾಟೀಲ ಅವರು ಮಾಡಿದ್ದಾರೆ. ಹೀಗಾಗಿ ಇಂದು ಉಚಿತ ಆರೋಗ್ಯ ತಪಾಸಣೆಯ ಜೊತೆಗೆ ಉಚಿತವಾಗಿ ಮಾತ್ರೆಗಳನ್ನು ನೀಡುತ್ತಿರುವುದು ಪರೋಪಕಾರದ ಕಾರ್ಯವಾಗಿದೆ. ನನಗೆ ರೋಗವಿಲ್ಲ. ನಾನು ಆರೋಗ್ಯವಾಗಿದ್ದೇನೆ ಎಂದು ಸುಮ್ಮನೆ ಕುಳಿತುಕೊಳ್ಳದೇ ಪ್ರತಿಯೊಬ್ಬರೂ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕೆಂದು ಗ್ರಾಮದ ಹಿರಿಯರಾದ ವೈಜಿನಾಥ ಕಾಂಬಳೆ ತಿಳಿಸಿದರು.

ಬೀದರ ತಾಲೂಕಿನ ಮರಖಲ್ ಗ್ರಾಮದಲ್ಲಿ ಅಣ್ಣೆಪ್ಪ ಪಾಟೀಲ ಗಾದಗಿ ಟ್ರಸ್ಟ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಜರುಗಿತು. ತಪಾಸಣಾ ಶಿಬಿರವನ್ನು ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಗಾಂಧಿ ಗಂಜ್ ಬ್ಯಾಂಕ್ ಅಧ್ಯಕ್ಷರಾದ ವಿಜಯಕುಮಾರ ಪಾಟೀಲ ಗಾದಗಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕೆಲವೇ ದಿವಸಗಳಲ್ಲಿ ಇದನ್ನು ನಿರ್ಧರಿಸಿ ಜನಸೇವೆ ಮಾಡುವ ದೃಷ್ಟಿಯಿಂದ ಉಚಿತ ಆರೋಗ್ಯ ತಪಾಸಣೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ಪ್ರತಿಯೊಬ್ಬರೂ ತಪಾಸಣೆ ಮಾಡಿಸಿಕೊಂಡು ಆರೋಗ್ಯದಿಂದ ಬದುಕಬೇಕು. ನಿಮ್ಮೆಲ್ಲರ ಆಶೀರ್ವಾದ ಸಹಾಯ ಸಹಕಾರ ನಮ್ಮ ಮೇಲೆ ಇರಲೆಂದು ತಿಳಿಸಿದರು.

ಡಾ. ಅಕ್ಷಯ್ ಸೋಮಶೇಖರ ಪಾಟೀಲ ಗಾದಗಿ ಅವರು ಗ್ರಾಮದ ಜನರ ಆರೋಗ್ಯ ತಪಾಸಣೆಗೈದರು. ಬಿ.ಪಿ. ಶುಗರ್ ಸೇರಿದಂತೆ ಮುಂತಾದ ಕಾಯಿಲೆಗಳ ಬಗ್ಗೆ ತಪಾಸಣೆಗೈದು, ಉಚಿತ ಮಾತ್ರೆಗಳನ್ನು ನೀಡಿ ಆರೋಗ್ಯ ಸಲಹೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯುವಕರು, ರೈತರು ಹಾಗೂ ತಾಯಂದಿರು ಈ ಶಿಬಿರದ ಸದುಪಯೋಗ ಪಡೆದುಕೊಂಡರು.