ಪಾಟಿ ಮೇಲೆ ಅಕ್ಷರಾಭ್ಯಾಸ ಆರಂಭಿಸಿದ ಮಕ್ಕಳು

ಬೀದರ್:ಜು.21: ಇಲ್ಲಿಯ ಶ್ರೀ ಶಿವಕುಮಾರೇಶ ಗುರುಕುಲ ಶಾಲೆಯಲ್ಲಿ 2022-23ನೇ ಸಾಲಿಗೆ ಪ್ರವೇಶ ಪಡೆದ ಮಕ್ಕಳು ಬುಧವಾರ ಪಾಟಿ ಮೇಲೆ ಅಕ್ಷರಾಭ್ಯಾಸ ಆರಂಭಿಸಿದರು.
ಶಾಲೆಯಲ್ಲಿ ಆಯೋಜಿಸಿದ್ದ ಸರಸ್ವತಿ ಪೂಜೆ ಹಾಗೂ ಅಕ್ಷರಾಭ್ಯಾಸ ಆರಂಭೋತ್ಸವದಲ್ಲಿ ಪಾಲಕರು, ಶಿಕ್ಷಕರ ನೆರವಿನಿಂದ ಕೈಯಲ್ಲಿ ಬಳಪ ಹಿಡಿದು ಖುಷಿ ಖುಷಿಯಿಂದ ಪಾಟಿ ಮೇಲೆ ಅ,ಆ,ಇ,ಈ, ಓಂ ಗಂಗಣಪತಯೇ ನಮಃ ಬರೆದರು. ಶ್ರೀಗಳು, ಶಿಕ್ಷಕರು ಹಾಗೂ ಪಾಲಕರು ಮಕ್ಕಳ ಅಕ್ಷರಾಭ್ಯಾಸ ಪ್ರಾರಂಭಕ್ಕೆ ಸಾಕ್ಷಿಯಾದರು.
ವಿದ್ಯೆಯಿಂದ ಸಾಧನೆ ಸಾಧ್ಯ: ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಸಿದ್ಧಾರೂಢ ಮಠದ ಡಾ. ಶಿವಕುಮಾರ ಸ್ವಾಮೀಜಿ, ವಿದ್ಯೆ ಇಲ್ಲದವರು ಪಶುವಿಗೆ ಸಮಾನ. ವಿದ್ಯೆ ಕಲಿತವರು ಏನು ಬೇಕಾದರೂ ಸಾಧಿಸಬಹುದು ಎಂದು ಹೇಳಿದರು.
ಮನೆಯೇ ಮೊದಲ ಪಾಠ ಶಾಲೆಯಾಗಿದೆ. ಪಾಲಕರು ಮಕ್ಕಳಿಗಾಗಿ ಸಂಪತ್ತು ಗಳಿಸುವುದಕ್ಕಿಂತ ಅವರಿಗೆ ಉತ್ತಮ ಸಂಸ್ಕಾರ ಕೊಡಬೇಕು ಎಂದು ಸಲಹೆ ಮಾಡಿದರು.
ಅನುಕರಣೆಯಿಂದ ಮಗುವಿನ ಪಾಠ ಆರಂಭವಾಗುತ್ತದೆ. ಹೀಗಾಗಿ ಪಾಲಕರು ಸರಸ್ವತಿ ವಿದ್ಯಾದೇವತೆಯಾಗಿದ್ದರೆ, ಗಣಪತಿ ಬುದ್ಧಿ ಪ್ರದಾಯಕನಾಗಿದ್ದಾನೆ. ಪ್ರತಿ ದಿನ ಇಬ್ಬರೂ ದೇವರನ್ನು ಸ್ಮರಣೆ ಮಾಡಬೇಕು ಎಂದರು.
ಇಂದು ವಿನಯವಂತ, ಬುದ್ಧಿವಂತ, ತಂದೆ-ತಾಯಿಯನ್ನು ಗೌರವಿಸುವ ಮಕ್ಕಳ ಅವಶ್ಯಕತೆ ಇದೆ. ಗುರುಕುಲ ಶಾಲೆಗಳಲ್ಲಿ ಮಾತ್ರ ಇಂಥ ಸಂಸ್ಕಾರವನ್ನು ಕಾಣಬಹುದು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯಶಿಕ್ಷಕ ಬಸವರಾಜ ಮ್ಯಾಗೇರಿ ಅವರು, 1987-88 ರಲ್ಲಿ 13 ವಿದ್ಯಾರ್ಥಿಗಳಿಂದ ಆರಂಭವಾದ ಗುರುಕುಲ ಶಾಲೆಯಲ್ಲಿ ಈಗ 800 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸಕಲ ಸೌಲಭ್ಯಗಳೊಂದಿಗೆ ಕನ್ನಡ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶಾಲೆಯ ಹಿರಿಮೆಯಾಗಿದೆ ಎಂದು ಹೇಳಿದರು.
ಸಾಧಕರಾದ ಸತೀಶ ದೇವರು, ವಿನಾಯಕ ದೇವರು, ಗೋಪಾಲ್ ಶಾಸ್ತ್ರಿ, ಚಂದ್ರಪ್ಪ ಗೌರಶೆಟ್ಟಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಚಂದ್ರಪ್ಪ ಭತಮುರ್ಗೆ, ಶ್ರೀಮತಿ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆಯ ಮುಖ್ಯಶಿಕ್ಷಕ ಲಕ್ಷ್ಮಣ ಪೂಜಾರಿ, ಮಾಣಿಕರಾವ್ ಪಾಂಚಾಳ, ಮಾತೆ ಸಿದ್ಧೇಶ್ವರಿ, ಮಾತೆ ಸಂಗೀತಾದೇವಿ, ಗೋಪಾಲ ರೆಡ್ಡಿ, ಚಂದ್ರಕಾಂತ, ತುಕಾರಾಮ, ಶೋಭಾವತಿ, ಶಿವಲೀಲಾ, ಕಲ್ಲಪ್ಪ, ದಿವ್ಯಭಾರತಿ ಇದ್ದರು.ಭುವನೇಶ್ವರಿ ನಿರೂಪಿಸಿದರು.