ಪಾಚು ಗಟ್ಟಿ ಸ್ಥಗಿತಗೊಂಡ; ನಡಿವಿ 14ಗ್ರಾಮಗಳ ಕುಡಿಯುವ ನೀರಿನ ಯೋಜನೆ


ಜಾಲಿಹಾಳ್ ರಾಜಾಸಾಬ್
ಸಿರುಗುಪ್ಪ, ಜೂ.02: ಪಾಚುಗಟ್ಟಿ ಸ್ಥಗಿತಗೊಂಡ ನಡಿವಿ 14 ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು  ನಡಿವಿ 14 ಗ್ರಾಮಗಳ ಜನರು ನೀರಿಗಾಗಿ ಬೋರ್‌ವೆಲ್‌ಗಳ ಮೊರೆ ಹೋಗಿರುವ ಪರಿಸ್ಥಿತಿ ಉಂಟಾಗಿದೆ.
ತಾಲೂಕಿನ ನಡಿವಿ 14 ಗ್ರಾಮಗಳ ಕುಡಿಯುವ ನೀರಿನ ಯೋಜನೆಯು ನಡಿವಿ, ಮುದ್ದಟನೂರು, ನಿಟ್ಟೂರು, ರುದ್ರಪಾದ, ಹೆರಕಲ್ಲು, ಉಡೇಗೋಳ, ಕೆಂಚನಗುಡ್ಡ, ಕೆಂಚನಗುಡ್ಡ  ತಾಂಡ, ದೇವಲಾಪುರ, ಮಣ್ಣೂರು, ಮಣ್ಣೂರು ಸೂಗೂರು, ಮಾಳಾಪುರ, ಸಿದ್ದರಾಮಪುರ ಗ್ರಾಮಗಳ ಜನರಿಗೆ ಶುದ್ದ ಕುಡಿಯುವ ನೀರೊದಗಿಸುವ ಉದ್ದೇಶದಿಂದ ನಡಿವಿ ಗ್ರಾಮದ ಹತ್ತಿರ ಹೊರವಲಯದಲ್ಲಿ ರೂ.15ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಸುಮಾರು 10ವರ್ಷಗಳ ಹಿಂದೆ ಜಾರಿಗೊಳಿಸಲಾಗಿತ್ತು.
ಈ ಯೋಜನೆಯು ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ಈ ಯೋಜನೆಯು 5ವರ್ಷಗಳವರೆಗೆ ಕುಂಟುತ್ತಾ ಸಾಗಿ ಕೊನೆಗೂ ಮುಗಿದು ಜನರಿಗೆ ನೀರು ಪೂರೈಕೆ ಆರಂಭವಾಯಿತು.  ಆದರೆ ನೀರು ಪೂರೈಕೆ ಮಾಡುವ ಪೈಪ್‌ಲೈನ್‌ಗಳ ಜೋಡಣೆಯು ಸಮರ್ಪಕವಾಗಿ ಆಗದೇ ಇರುವುದರಿಂದ ಅನೇಕ ಗ್ರಾಮಗಳಲ್ಲಿ ನೀರು ಪೂರೈಕೆ ಸಮಯದಲ್ಲಿ ಪೈಪ್‌ಗಳು ಒಡೆದು ಹೋಗುವುದು ಸಾಮಾನ್ಯವಾಗಿತ್ತು.  ಪೈಪ್‌ಗಳ ರಿಪೇರಿ ಮಾಡಲು ಸುಮಾರು 6 ತಿಂಗಳ ಕಾಲ ತೆಗೆದುಕೊಂಡ ನಂತರವೂ 14 ಗ್ರಾಮಗಳಿಗೆ ಸಮರ್ಪಕವಾಗಿ ಕುಡಿಯುವ ನೀರೊದಗಿಸುವ ಕಾರ್ಯ ಮಾಡಲು ಅಧಿಕಾರಿಗಳಿಂದ ಇಲ್ಲಿಯವರೆಗೆ ಸಾಧ್ಯವಾಗಿಲ್ಲ.
ನಡಿವಿ 14 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನೀರು ಪೂರೈಕೆಯ ಮೂಲವಾಗಿರುವುದು ತುಂಗಭದ್ರ ನದಿ. ಕಳೆದ 2 ವರ್ಷಗಳಿಂದ ಬೇಸಿಗೆ ಸಮಯದಲ್ಲಿ ನದಿಯು 2 ರಿಂದ 3 ತಿಂಗಳು ಬತ್ತಿ ಹೋಗುತ್ತಿರುವುದರಿಂದ 14 ಗ್ರಾಮಗಳ ಜನರು ಬೋರ್‌ವೆಲ್ ನೀರನ್ನು ಆಶ್ರಯಿಸುವುದು ಸಾಮಾನ್ಯವಾಗಿದೆ. ಆದರೆ ನದಿಯಲ್ಲಿ ನೀರಿರುವ ಸಂದರ್ಭದಲ್ಲಿಯೂ ಜನರಿಗೆ ಸಮಪರ್ಕವಾಗಿ ಈ ಯೋಜನೆಯಿಂದ ನೀರು ಪೂರೈಕೆಯಾಗುತ್ತಿಲ್ಲ ಎನ್ನುವ ಆರೋಪ ಅನೇಕ ಗ್ರಾಮಸ್ಥರದ್ದಾಗಿದೆ.
ಈ ಬಾರಿ ನದಿಯಲ್ಲಿ ನೀರು ಬತ್ತಿ ಹೋಗಿರುವುದರಿಂದ ಈ ಯೋಜನೆ ಸ್ಥಗಿತಗೊಂಡಿದ್ದು ಆದರೆ ಜನರಿಗೆ ನೀರು ಒದಗಿಸುವ ಉದ್ದೇಶದಿಂದ ನದಿ ಪಾತ್ರದಲ್ಲಿರುವ ಗ್ರಾಮಗಳ ಜನರಿಗೆ ನೀರು ಪೂರೈಕೆ ಮಾಡಲು ನದಿಯಲ್ಲಿ ಶ್ಯಾಲ್ವಾ ಬೋರ್‌ವೆಲ್‌ಗಳನ್ನು ಕೊರೆದು ನೀರು ಪೂರೈಕೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಾ.ಪಂ. ಇ.ಒ. ಎಂ.ಬಸಪ್ಪ ತಿಳಿಸಿದ್ದಾರೆ.
ಶುದ್ಧ ನೀರು ಒದಗಿಸುವ ಯೋಜನೆಯು ಸ್ಥಗಿತಗೊಂಡಿದ್ದು, ಶುದ್ಧ ನೀರಿನ ಘಟಕಗಳೇ ಕುಡಿಯಲು ಆಸರೆಯಾಗಿವೆ. ಬಳಕೆಗೆ ಬೋರ್‌ವೆಲ್ ನೀರನ್ನು ಗ್ರಾ.ಪಂ. ಅಧಿಕಾರಿಗಳು ಬಿಡುತ್ತಿದ್ದಾರೆಂದು ನಡಿವಿ ಗ್ರಾಮಸ್ಥರ ಚಿದಾನಂದ, ಪಂಪಣ್ಣ ಹೇಳಿದರು.