ಪಾಕ್ ಮಾಜಿ ಪ್ರಧಾನಿ ನವಾಜ್ ಪಾಸ್ಪೋರ್ಟ್ ರದ್ದು ಪಾಕ್ ನಿರ್ಧಾರ

ಇಸ್ಲಾಮಾಬಾದ್, ಡಿ. ೩೧- ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಅವರ ಪಾಸ್ಪೋರ್ಟ್ ಅನ್ನು ಫೆಬ್ರವರಿ ೧೬ರಂದು ರದ್ದುಪಡಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ನಾಲ್ಕು ವಾರಗಳ ಕಾಲ ಚಿಕಿತ್ಸೆ ಪಡೆಯಲು ಲಾಹೋರ್ ಹೈಕೋರ್ಟ್ ಮಂಜೂರು ಮಾಡಿದ ನಂತರ ಕಳೆದ ನವೆಂಬರ್ ತಿಂಗಳಿಂದ ನವಾಜ್ ಶರೀಫ್ ಅವರು ಲಂಡನ್ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ ಪಕ್ಷದ ಮುಖ್ಯಸ್ಥರಾಗಿರುವ ೭೦ ವರ್ಷದ ಶರೀಫರು ಲಂಡನ್ ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ಬಾರಿ ಪಾಕಿಸ್ತಾನದ ಪ್ರಧಾನಮಂತ್ರಿಯಾಗಿದ್ದ ನವಾಜ್ ಷರೀಫ್ ಅವರು ಎರಡು ಬ್ರಷ್ಟಾಚಾರ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ.
ನವಾಜ್ ಶರೀಫ್ ಅವರ ಪಾಸ್ಪೋರ್ಟ್ ಅನ್ನು ಫೆಬ್ರವರಿ ೧೬ರಂದು ರದ್ದು ಪಡಿಸುತ್ತವೆ ಎಂದು ಆಂತರಿಕ ಭದ್ರತಾ ಸಚಿವ ಶೇಕ್ ರಶೀದ್ ಅಹ್ಮದ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಆದರೆ ಹೆಚ್ಚಿನ ವಿವರಗಳನ್ನು ನೀಡಲು ಅವರು ಬಯಸಲಿಲ್ಲ.
ಈ ನಡುವೆ ನವಾಜ್ ಶರೀಫ್ ಅವರನ್ನು ಲಂಡನ್ನಿಂದ ಪಾಕಿಸ್ತಾನಕ್ಕೆ ಕಳಿಸಲ ಬ್ರಿಟನ್ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪಾಕಿಸ್ತಾನ ಈಗಾಗಲೇ ತಿಳಿಸಿದೆ. ಭ್ರಷ್ಟಾಚಾರ ಪ್ರಕರಣಗಳಲ್ಲಿ ಮಾಜಿ ಪ್ರಧಾನ ಮಂತ್ರಿಯವರನ್ನು ಆರೋಪಿಯೆಂದು ನ್ಯಾಯಾಲಯಗಳು ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಆದಷ್ಟು ಬೇಗ ಅವರನ್ನು ಕಳುಹಿಸಿಕೊಡುವಂತೆ ಕೋರಲಾಗಿದೆ.
ಪ್ರಧಾನಮಂತ್ರಿಯವರ ಸಲಹೆಗಾರ ಮಿರ್ಜಾ ಶಹಜಾದ್ ಅಕ್ಬರ್ ಅವರು ಈ ವಿಷಯವನ್ನು ತಿಳಿಸಿದ್ದಾರೆ. ಗಡಿಪಾರು ಮಾಡುವಂತಹ ಒಪ್ಪಂದ ವಿಚಾರದಲ್ಲಿ ಪಾಕಿಸ್ತಾನ ಮತ್ತು ಬ್ರಿಟನ್ ನಡುವೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಶರೀಫ್ ಅವರನ್ನು ಗಡಿಪಾರು ಮಾಡುವ ವಿಚಾರ ಕುರಿತು ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.