ಪಾಕ್ ಪೊಲೀಸ್ ಉನ್ನತ ಹುದ್ದೆಯಲ್ಲಿ ಹಿಂದೂ ಯುವತಿ

ಇಸ್ಲಾಮಾಬಾದ್, ಜು.೨೯- ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿ ಹಾಗೂ ಪುರುಷ ಪ್ರಧಾನ ವ್ಯವಸ್ಥೆ ಇರುವ ಪಾಕಿಸ್ತಾನದಲ್ಲಿ ಸದ್ಯ ಪೊಲೀಸ್ ಇಲಾಖೆಯಲ್ಲಿ ಹಿಂದೂ ಮಹಿಳೆಯೊಬ್ಬಳು ಉನ್ನತ ಸ್ಥಾನಕ್ಕೆ ಏರಿದ ಸಾಧನೆ ತೋರಿದ್ದಾಳೆ. ಮನೀಷಾ ರೊಪೇಟಾ ಎಂಬ ಮಹಿಳೆ ಪಾಕಿಸ್ತಾನದಲ್ಲಿ ಉಪ ಪೊಲೀಸ್ ಅಧೀಕ್ಷಕರಾಗಿ ಆಯ್ಕೆಯಾದ ಮೊಟ್ಟಮೊದಲ ಹಿಂದೂ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಸಿಂಧ್ ಪೊಲೀಸ್ ಇಲಾಖೆಗೆ ೨೬ ವರ್ಷ ವಯಸ್ಸಿನ, ಸಿಂಧ್ ಪ್ರಾಂತ್ಯದ ಜಾಕೋಬಾಬಾದ್‌ನ ನಿವಾಸಿ ಮನೀಷಾ ರೊಪೇಟಾ ಸೇರ್ಪಡೆಯಾಗಿದ್ದು, ಸದ್ಯ ಹುದ್ದೆಯಲ್ಲಿರುವ ಕೆಲವೇ ಮಹಿಳಾ ಅಧಿಕಾರಿಗಳಲ್ಲಿ ಇವರೂ ಒಬ್ಬರು ಎಂದು ಮಾಧ್ಯಮಗಳು ವರದಿ ಮಾಡಿದೆ. ಪಾಕಿಸ್ತಾನದ ಪುರುಷ ಪ್ರಧಾನ ಸಮಾಜ ಮತ್ತು ವ್ಯವಸ್ಥೆಯಲ್ಲಿ ಪೊಲೀಸ್ ಪಡೆಯಂಥ ವೃತ್ತಿಗೆ ಮಹಿಳೆಯರು ಸೇರುವುದು ನಿಯಕ್ಕೂ ಕಷ್ಟಕರ. ಅಲ್ಲದೆ ಅಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿಯಾಗುತ್ತಿದ್ದು, ಬದುಕುವುದೇ ದುಸ್ತರವಾಗಿ ಮಾರ್ಪಟ್ಟಿದೆ. ಇದೆಲ್ಲದರ ಅಡೆತಡೆಗಳ ನಡುವೆ ಮನೀಷಾ ಅವರು ಉಪ ಪೊಲೀಸ್ ಅಧೀಕ್ಷಕರಾಗಿ ನೇಮಕಗೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮನೀಷಾ, ಬಾಲ್ಯದಿಂದಲೂ ನಾನು ಹಾಗೂ ಸಹೋದರಿ ಇಬ್ಬರೂ ಹಳೆಯ ಪುರುಷ ಪ್ರಧಾನ ವ್ಯವಸ್ಥೆಯಲ್ಲೇ ಬೆಳೆದಿದ್ದೇವೆ. ಸುಶಿಕ್ಷಿತರಾಗಿ ಉದ್ಯೋಗ ಮಾಡಬೇಕಾದರೆ ಶಿಕ್ಷಕಿ ಅಥವಾ ವೈದ್ಯೆ ಹುದ್ದೆ ಮಾತ್ರ ಎಂಬ ಭಾವನೆ ಇತ್ತು. ಒಳ್ಳೆಯ ಕುಟುಂಬದ ಹಿನ್ನೆಲೆಯ ಹುಡುಗಿಯರು ಪೊಲೀಸ್ ಅಥವಾ ಜಿಲ್ಲಾ ನ್ಯಾಯಾಲಯಗಳ ಹುದ್ದೆಗಳಿಗೆ ಹೋಗಬಾರದು ಎಂಬ ಭಾವನೆಯನ್ನು ಕೊನೆಗೊಳಿಸಲು ನಾನು ಬಯಸಿದ್ದೇನೆ. ಮಹಿಳೆಯರು ಅತ್ಯಂತ ದಮನಕ್ಕೆ ಒಳಗಾದವರು ಹಾಗೂ ಬಹುತೇಕ ಅಪರಾಧಗಳು ಸಮಾಜದಲ್ಲಿ ಮಹಿಳೆಯರನ್ನೇ ಗುರಿ ಮಾಡಿ ನಡೆಯುತ್ತವೆ. ಸಮಾಜದಲ್ಲಿರುವ ಮಹಿಳೆಯರಿಗೆ ಸಂರಕ್ಷಕರ ಅಗತ್ಯವಿದೆ ಎಂಬ ಭಾವನೆ ನನ್ನಲ್ಲಿರುವುದರಿಂದ ಪೊಲೀಸ್ ಪಡೆ ಸೇರಿದ್ದೇನೆ ಎಂದು ತಿಳಿಸಿದ್ದಾರೆ. ಪ್ರಸ್ತುತ ತರಬೇತಿಯಲ್ಲಿರುವ ಮನೀಷಾ ರೊಪೇಟಾ ಅವರನ್ನು ಅಪರಾಧ ಪೀಡಿತ ಲೈಯಾರಿ ಪ್ರದೇಶಕ್ಕೆ ನಿಯೋಜಿಸುವ ಸಾಧ್ಯತೆ ಇದೆ.