ಪಾಕ್ ಪರ ಘೋಷಣೆ: ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್ ಪ್ರಮಾಣವಚನ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಕಲಬುರಗಿ:ಫೆ.28: ಬೆಂಗಳೂರಿನ ವಿಧಾನಸೌಧದಲ್ಲಿ ಕಳೆದ ಮಂಗಳವಾರ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಯ್ಯದ್ ನಾಸೀರ್ ಹುಸೇನ್ ಅವರ ಗೆಲುವಿನ ಸಂದರ್ಭದಲ್ಲಿ ಅವರ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವುದು ಖಂಡನೀಯ, ಕೂಡಲೇ ಸರ್ಕಾರ ತಪ್ಪಿಸ್ಥರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ತನಿಖೆಯ ತೀರ್ಪು ಬರುವವರೆಗೂ ರಾಜ್ಯಸಭಾ ಸದಸ್ಯರಾಗಿ ನಾಸೀರ್ ಹುಸೇನ್ ಅವರು ಪ್ರಮಾನವಚನ ಸ್ವೀಕರಿಸಲು ಅವಕಾಶ ಕೊಡಬಾರದು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಉತ್ತರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬುಧವಾರ ಪ್ರತಿಭಟನಾ ಪ್ರದರ್ಶನ ಮಾಡಿದರು.
ಸಂಘಟನೆಯ ರಾಜ್ಯ ಕಾರ್ಯದರ್ಶಿ ಸಚಿನ್ ಕುಳಗೇರಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ವಿವಿಧ ಕಾಲೇಜುಗಳ ಅನೇಕ ವಿದ್ಯಾರ್ಥಿಗಳು ಹಾಗೂ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುವ ಸಂದರ್ಭದಲ್ಲಿ ಅವರ ಪಕ್ಕದಲ್ಲಿ ಇರುವ ವ್ಯಕ್ತಿಗಳು ಸಹಿತ ತಡೆಯುವುದಕ್ಕೆ ಪ್ರಯತ್ನ ಮಾಡಲಿಲ್ಲ ಹಾಗೂ ಅಲ್ಲಿಯೇ ಇದ್ದ ನಾಸೀರ್ ಹುಸೇನ್ ಅವರೂ ಸಹಿತ ಇದಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ, ಪಾಕ್ ಪರ ಘೋಷಣೆ ಕುರಿತು ಪತ್ರಕರ್ತರು ಪ್ರತಿಕ್ರಿಯೆ ಕೇಳಿದಾಗ ನಾಸೀರ್ ಹುಸೇನ್ ಅವರು ನಿರಾಕರಿಸಿ, ಪ್ರಶ್ನೆ ಮಾಡಿದ ಮಾಧ್ಯಮ ಸಿಬ್ಬಂದಿ ಮೇಲೆಯೇ ದರ್ಪ ತೋರಿರುವುದು ನೋಡಿದರೆ ದೇಶದ್ರೋಹಿಗಳಿಗೆ ಬೆಂಬಲ ನೀಡಲು ಹೊರಟಿದ್ದಾರಾ ಎಂಬ ಪ್ರಶ್ನೆ ಮೂಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೆಲವು ದಿನಗಳ ಹಿಂದೆ ವಿಧಾನಸಭೆ ಚುನಾವಣೆ ಗೆಲುವಿನ ಸಂದರ್ಭದಲ್ಲೂ ಬೆಳಗಾವಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿ ಪಾಕಿಸ್ತಾನದ ಧ್ವಜ ಹಾರಿಸಿದ್ದರು. ದೇಶದ್ರೋಹಿಗಳಿಗೆ ವಿಧಾನಸಭೆಯಲ್ಲಿ ಜಾಗ ಕೊಟ್ಟಿರುವುದು ಆತಂಕಕಾರಿ ಬೆಳವಣಿಗೆ, ಈ ವಿಷಯ ಅತ್ಯಂತ ಗಂಭೀರವಾಗಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಇರುವುದಕ್ಕೆ ಪದೇ ಪದೇ ಇಂತಹ ಘಟನೆಗಳು ನಡೆಯುತ್ತವೆ. ಸರ್ಕಾರ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಪಾಕಿಸ್ತಾನ್ ಪರ ಘೋಷಣೆ ಕೂಗಿದ ವ್ಯಕ್ತಿಯ ಮೇಲೆ ದೇಶದ್ರೋಹದ ಅಪರಾಧದ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಮತ್ತು ಪ್ರಕರಣದ ಸೂಕ್ತ ತನಿಖೆ ನಡೆದು ತೀರ್ಪು ಪ್ರಕಟವಾಗುವ ತನಕ ರಾಜ್ಯ ಸಭೆಯ ಸದಸ್ಯರಾಗಿ ಪ್ರಮಾಣ ವಚನವನ್ನು ನೀಡಬಾರದು ಎಂದು ಅಗ್ರಹಿಸಿದ ಅವರು, ಸರ್ಕಾರ ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ರೂಪಿಸುವುದಾಗಿ ಎಚ್ಚರಿಸಿದರು.