ಪಾಕ್ ಪರ ಘೋಷಣೆ, ಮಾರ್ದನಿ

ಬೆಂಗಳೂರು, ಫೆ. ೨೮- ಪಾಕಿಸ್ತಾನ ಪರ ಜಿಂದಾಬಾದ್ ಘೋಷಣೆ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಆಡಳಿತ- ವಿರೋಧ ಪಕ್ಷಗಳ ನಡುವೆ ವಾದ, ವಾಗ್ವಾದ, ಮಾತಿನ ಚಕಮಕಿ, ನಡೆದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ರಾಜೀನಾಮೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದು ಧರಣಿ ನಡೆಸಿದ್ದು, ಕಲಾಪವನ್ನು ನಾಳೆಗೆ ಮುಂದೂಡುವಂತಾಯಿತು.ಇಂದು ಸದನ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಭಾರತ್ ಮಾತಾಕಿ ಜಿಂದಾಬಾದ್ ಎಂಬ ಘೋಷಣೆ ಕೂಗಿದರು. ಪ್ರತಿಪಕ್ಷ ನಾಯಕ ಆರ್. ಅಶೋಕ್, ವಿಷಯ ಪ್ರಸ್ತಾಪಿಸುತ್ತಿದ್ದಂತೆ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿ ಸಭಾದ್ಯಕ್ಷರು ಸದನವನ್ನು ಹತ್ತು ನಿಮಿಷ ಕಾಲ ಮುಂದೂಡಿ ತಮ್ಮ ಕೊಠಡಿಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರ ಸಂದಾನ ಸಭೆ ನಡೆಸಿ ಈ ಕುರಿತ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದರು. ಇದಕ್ಕೆ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರು ಒಪ್ಪಿಕೊಂಡರು. ಮತ್ತೆ ಸದನ ಸಮಾವೇಶಗೊಂಡಾಗ ಈ ಪ್ರಕರಣದ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡಿದ್ದರು.
ಸಭಾಧ್ಯಕ್ಷರು ಚರ್ಚೆಗೆ ಅವಕಾಶ ಕೊಡುತ್ತಿದ್ದಂತೆಯ ಆಡಳಿತ ಮತ್ತು ವಿಪಕ್ಷ ನಾಯಕರು ಚರ್ಚೆಯಲ್ಲಿ ಪಾಲ್ಗೊಂಡು ಘೋಷಣೆ ಕೂಗಿರುವುದನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.ಈ ಚರ್ಚೆಯ ಸಂದರ್ಭದಲ್ಲಿ ಹಲವು ಬಾರಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ, ಮಾತಿನ ಚಕಮಕಿ ನಡೆದೆ ಇತ್ತು.
ಕಠಿಣ ಕ್ರಮ
ಚರ್ಚೆಯ ನಂತರ ಸರ್ಕಾರದ ಪರವಾಗಿ ಉತ್ತರ ನೀಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಪಾಕಿಸ್ತಾನ ಜಿಂದಾಬಾದ್ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ವಯ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಎಫ್‌ಎಸ್‌ಎಲ್‌ಗೂ ವಿಡಿಯೋ, ಆಡಿಯೋ ತುಣುಕು ಕಳುಹಿಸಲಾಗಿದೆ. ವೈಜ್ಞಾನಿಕ ತನಿಖೆ ನಡೆಸಿದ್ದೇವೆ. ಈ ಘಟನೆ ಖಂಡನಾರ್ಹ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ನಿಶ್ಚಿತ ಎಂದು ಹೇಳಿದರು.
ಇಂತಹ ಘಟನೆ ರಾಜ್ಯದ ಯಾವುದೇ ಮೂಲೆಯಲ್ಲೂ ನಡೆದರೂ ಅದರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಇದರಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಲ್ಲದರ ಬಗ್ಗೆಯೂ ಕೂಲಂಕುಷ ತನಿಖೆ ನಡೆಸುತ್ತಿದ್ದೇವೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಇದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.
ಗೃಹ ಸಚಿವರ ಉತ್ತರದ ನಂತರ ಮಾತನಾಡಿದ ಪ್ರತಿಪಕ್ಷದ ನಾಯಕ ಆರ್. ಅಶೋಕ್, ಈ ಘಟನೆ ನಡೆದ ಸಂದರ್ಭದಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿರುವ ನಾಸೀರ್ ಹುಸೇನ್ ಅವರು ಒಂದು ಮಾತನಾಡಲಿಲ್ಲ. ಅವರು ಆಗಲೇ ಈ ಘಟನೆಯನ್ನು ಖಂಡಿಸಿದ್ದರೆ ಇಷ್ಟೆಲ್ಲಾ ಚರ್ಚೆ ಮಾಡುವ ಅಗತ್ಯವೇ ಇರಲಿಲ್ಲ. ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ನಾಸೀರ್ ಹುಸೇನ್ ಘೋಷಣೆ ಕೂಗಿದರೂ ಮೌನವಾಗಿದ್ದರು. ಇಂತಹವರನ್ನು ಟಿಕೆಟ್ ಕೊಟ್ಟು ರಾಜ್ಯಸಭೆಗೆ ಕಳುಹಿಸಿದ್ದೀರಿ ಎಂದು ಹೇಳಿ, ಪತ್ರಕರ್ತರ ಮೇಲೂ ದೌರ್ಜನ್ಯ ಎಸಗಿ ಗೆಟ್‌ಔಟ್ ಎಂದಿದ್ದಾರೆ ಎಂದರು.ಈ ಘಟನೆಗೆ ಸಂಬಂಧಿಸಿದಂತೆ ವಿಡಿಯೋ ತುಣುಕುಗಳು ಇದ್ದರೂ ನೀವು ಇನ್ನೂ ಎಫ್‌ಎಸ್‌ಎಲ್ ವರದಿ ಬರಲಿ ಎಂದೆಲ್ಲಾ ಹೇಳುತ್ತಿರುವುದು ಸರಿಯಲ್ಲ. ಕೂಡಲೇ ಕ್ರಮ ಆಗಬೇಕು. ವಿಡಿಯೋ ಸಾಕ್ಷಿಗಳಿದ್ದರೂ ಘೋಷಣೆ ಕೂಗಿದವರನ್ನು ಬಂಧಿಸದೆ ಇರಲು ಕಾರಣವೇನು ಎಂದು ಪ್ರಶ್ನಿಸಿ, ಸರ್ಕಾರದ ಉತ್ತರ ತಮಗೆ ತೃಪ್ತಿ ತಂದಿಲ್ಲ. ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಪಕ್ಷ ನಾಯಕ ಅಶೋಕ್ ತಮ್ಮ ಸದಸ್ಯರ ಜತೆ ಸಭಾಧ್ಯಕ್ಷರ ಮುಂದಿನ ಬಾವಿಗೆ ಆಗಮಿಸಿ ಧರಣಿ ಆರಂಭಿಸಿ ಘೋಷಣೆಗಳನ್ನು ಕೂಗಲು ಮುಂದಾದರು. ಆಗ ಸಭಾಧ್ಯಕ್ಷರು ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು.ನಂತರ ಸದನ ಮತ್ತೆ ಸಮಾವೇಶಗೊಂಡಾಗ ಬಿಜೆಪಿ ಸದಸ್ಯರು ಧರಣಿ ಮುಂದುವರೆಸಿ ಸರ್ಕಾರವನ್ನು ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದ್ದರಿಂದ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣಗೊಂಡು ಕಲಾಪವನ್ನು ನಾಳೆಗೆ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ನಾಳೆಗೆ ಮುಂದೂಡಿದರು.