ಪಾಕ್ ಪರಘೋಷಣೆ ಹಿಂದೆ ಬಿಜೆಪಿ ಏಜೆಂಟ್: ಕೃಷ್ಣಮೂರ್ತಿ

ಸಂಜೆವಾಣಿ ವಾರ್ತೆ
ಚಾಮರಾಜನಗರ,ಫೆ.29- ನೂತನ ರಾಜ್ಯಸಭಾ ಸದಸ್ಯರ ವಿಜಯೋತ್ಸವದ ವೇಳೆ ಪಾಕಿಸ್ತಾನದ ಪರಘೋಷಣೆ ಕೂಗಿರುವವರು ಬಿಜೆಪಿ ಆರ್.ಎಸ್.ಎಸ್ ನಿಂದ ತರಬೇತಿ ಪಡೆದವರೇ ಆಗಿದ್ದಾರೆ ಎಂದು ಬಿಎಸ್ಪಿ ರಾಜ್ಯ ಉಸ್ತುವಾರಿ ಕೃಷ್ಣಮೂರ್ತಿ ಗಂಭೀರ ಆರೋಪ ಮಾಡಿದ್ದಾರೆ.
ಚಾಮರಾಜನಗರದಲ್ಲಿ ಮಾಧ್ಯಮವರೊಂದಿಗೆ ಅವರು ಮಾತನಾಡಿ, ಈ ಹಿಂದೆ ಮಂಡ್ಯದಲ್ಲಿ ನಡೆದ ಹನುಮಧ್ವಜ ವಿವಾದದ ವೇಳೆ ಕೂಡ ಆರ್.ಎಸ್.ಎಸ್ ಬಿಜೆಪಿಯ ಟ್ರೈನ್ಡ್ ಕಾರ್ಯಕರ್ತರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿ ಕೋಮು ಗಲಭೆ ಸೃಷ್ಟಿಸಲು ಮುಂದಾಗಿದ್ದರು, ಇತ್ತೀಚೆಗೆ ನಡೆದ ವಿಧಾನಸಭೆ, ವಿಧಾನ ಪರಿಷತ್, ರಾಜ್ಯಸಭಾ ಚುನಾವಣೆಗಳಲ್ಲಿ ಬಿಜೆಪಿ ಹೀನಾಯವಾಗಿ ಸೋಲುಂಡಿದೆ, ನಿನ್ನೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ಒಬ್ಬ ಶಾಸಕ ಕ್ರಾಸ್ ವೋಟಿಂಗ್ ಮಾಡಿದ್ದು, ಮತ್ತೊಬ್ಬ ಶಾಸಕ ಮತದಾನದಿಂದ ದೂರು ಉಳಿದಿದ್ದಾರೆ. ಈ ಮುಖಭಂಗವನ್ನು ಮುಚ್ಚಿಟ್ಟು ಕೊಳ್ಳಲು ಪಾಕ್ ಪರಘೋಷಣೆ ಹಾಗೂ ಹೋರಾಟದ ಹುನ್ನಾರ ರೂಪಿಸಿರುವ ಗುಮಾನಿ ಇದೆ ಎಂದರು.
ಘೋಷಣೆ ಕೂಗಿಸಿ ಕೋಮುಗಲಭೆ ಸೃಷ್ಟಿಸುವ ಮೂಲಕ ದೇಶದಲ್ಲಿ ಅರಾಜಕತೆ ಉಂಟು ಮಾಡಲು ಮುಂದಾಗಿದ್ದಾರೆ, ಸರ್ಕಾರ ನಿನ್ನೆ ಘೋಷಣೆ ಕೂಗಲಾದ ವೀಡಿಯೋ ಅಸಲಿಯತ್ತು ಪರೀಕ್ಷೆಗೆ ಕಳುಹಿಸಿದ್ದು, ಎಫ್.ಎಸ್.ಎಲ್ ವರದಿ ಬರುವ ಮೊದಲೇ ಬಿಜೆಪಿ ನಾಯಕರು ಸದನದ ಹೊಳಗೆ ಹಾಗು ಹೊರಗೆ ಪ್ರತಿಭಟನೆ ನಡೆಸುತ್ತಿರುವುದರ ಹಿಂದೆ ಹುನ್ನಾರ ಅಡಗಿದೆ, ಹೀಗಾಗಿ ರಾಜ್ಯ ಸರ್ಕಾರ ನಿನ್ನೆ ನಡೆದ ಪ್ರಕರಣದ ಜೊತೆಗೆ ಮಂಡ್ಯ ಹಾಗು ಹುಬ್ಬಳ್ಳಿಯಲ್ಲಿ ನಡೆದ ಪ್ರಕರಣಗಳನ್ನು ವಿಶೇಷ ತನಿಖೆಗೆ ಒಳಪಡಿಸಬೇಕು, ಪಾಕಿಸ್ತಾನದ ಪರಘೋಷಣೆ ಕೂಗಿದವರನ್ನು ದೇಶದ್ರೋಹ ಕಾಯ್ದೆಯಡಿ ಬಂಧಿಸಬೇಕು ಎಂದು ಆಗ್ರಹಿಸಿದರು.
ಪಾಕ್ ಪರಘೋಷಣೆ ಕೂಗುವ ಮೂರ್ಖರು ಕರ್ನಾಟಕದಲ್ಲಿಲ್ಲ, ಒಂದು ವೇಳೆ ಪಾಕ್ ಪರ ಒಲವು ಇಟ್ಟುಕೊಂಡಿದ್ದವರು ಇದ್ದರೇ ಅವರನ್ನು ಪಾಕಿಸ್ತಾನಕ್ಕೇ ಕಳುಹಿಸಲಿ, ಆ ದೇಶಕ್ಕೆ ಕಳುಹಿಸಲು ಕೇಂದ್ರ ಸರ್ಕಾರಕಾಯ್ದೆ ರೂಪಿಸಬೇಕು ಎಂದರು.
ಜನರು ಕೋಮು ಗಲಭೆ ಸೃಷ್ಟಿಸುವವರ ಮಾತಿಗೆ ಮನ್ನಣೆ ನೀಡಬಾರದು ಎಂದು ಮನವಿ ಮಾಡಿದರು.