ಪಾಕ್‌ನಲ್ಲಿ ಪುರಾತನ ಹಿಂದೂ ದೇವಾಲಯ ಜೀರ್ಣೋದ್ಧಾರ

ಇಸ್ಲಮಾಬಾದ್/ ನವದೆಹಲಿ.ಆ.೪- ದೇವಾಲಯದಲ್ಲಿ ಅಕ್ರಮವಾಗಿ ನೆಲೆಸಿರುವವರನ್ನು ತೆರವುಗೊಳಿಸಿದ ಬಳಿಕ ಪಾಕಿಸ್ತಾನದಲ್ಲಿರುವ ಪುರಾತನ ಹಿಂದೂ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಲು ನಿರ್ಧರಿಸಲಾಗಿದೆ.
ಲಾಹೋರ್ ಪ್ರಸಿದ್ಧ ಅನಾರ್ಕಲಿ ಬಜಾರ್ ಬಳಿ ಇರುವ ವಾಲ್ಮೀಕಿ ಮಂದಿರವನ್ನು ಕಳೆದ ತಿಂಗಳು ಕ್ರಿಶ್ಚಿಯನ್ ಕುಟುಂಬದಿಂದ ಹಿಂಪಡೆಯಲಾಗಿದೆ. ಕೃಷ್ಣ ದೇವಾಲಯದ ಜೊತೆಗೆ, ವಾಲ್ಮೀಕಿ ದೇವಾಲಯ ಲಾಹೋರ್‍ನಲ್ಲಿರುವ ಹಿಂದೂ ದೇವಾಲಯವಾಗಿದೆ.
ಸುದೀರ್ಘ ನ್ಯಾಯಾಲಯದ ಹೋರಾಟದ ನಂತರ “ಅಕ್ರಮ ನಿವಾಸಿಗಳನ್ನು” ಹೊರಹಾಕಿದ ನಂತರ ಪಾಕಿಸ್ತಾನದಲ್ಲಿರುವ ೧,೨೦೦ ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯವನ್ನು ಪುನಃಸ್ಥಾಪಿಸಲು ನಿರ್ಧರಿಸಲಾಗಿದೆ.
ಭಾರತದಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ೧೯೯೨ ರಲ್ಲಿ ಪಾಕಿಸ್ತಾನದ ಹಿಂದೂ ದೇವಾಲಯವನ್ನು ನೆಲಸಮಗೊಳಿಸಲಾಗಿತ್ತು.ಇದರಿಂದ ಅಕ್ಕಪಕ್ಕದ ಅಂಗಡಿಗಳಿಗೂ ಬೆಂಕಿ ಹಚ್ಚಿದ್ದರು.
ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವುದಾಗಿ ಹೇಳಿಕೊಳ್ಳುವ ಕ್ರೈಸ್ತ ಕುಟುಂಬ ಕಳೆದ ಎರಡು ದಶಕಗಳಿಂದ ವಾಲ್ಮೀಕಿ ಜಾತಿಯ ಹಿಂದೂಗಳಿಗೆ ಮಾತ್ರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಅನುಕೂಲ ಮಾಡಿಕೊಡುತ್ತಿದೆ.
ಮುಂದಿನ ದಿನಗಳಲ್ಲಿ ’ಮಾಸ್ಟರ್ ಪ್ಲಾನ್ ಪ್ರಕಾರ ವಾಲ್ಮೀಕಿ ದೇವಾಲಯವನ್ನು ಪುನಃಸ್ಥಾಪಿಸಲಾಗುವುದು ಎಂದು ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ ವಕ್ತಾರ ಅಮೀರ್ ಹಶ್ಮಿ ಹೇಳಿದ್ದಾರೆ.
“೧೦೦ ಕ್ಕೂ ಹೆಚ್ಚು ಹಿಂದೂಗಳು, ಕೆಲವು ಸಿಖ್ ಮತ್ತು ಕ್ರಿಶ್ಚಿಯನ್ ನಾಯಕರು ಇಂದು ವಾಲ್ಮೀಕಿ ದೇವಸ್ಥಾನದಲ್ಲಿ ಜಮಾಯಿಸಿ ದೇವಾಲಯದಲ್ಲಿ ಧಾರ್ಮಿಕ ಆಚರಣೆಗೆ ಅವಕಾಶ ಮಾಡಿಕೊಡುವಂತೆ ಒತ್ತಡ ಹೇರಿದ್ದರು.