ಪಾಕಿಸ್ತಾನಕ್ಕೆ ಐಎಂಎಫ್ ನೆರವು

ಕರಾಚಿ (ಪಾಕಿಸ್ತಾನ), ಜು.೧೩- ಈಗಾಗಲೇ ಹಣಕಾಸಿನ ತೀವ್ರ ಕೊರತೆಯಿಂದ ಬಹುತೇಕ ದಿವಾಳಿಯತ್ತ ತೆರಳಿರುವ ಪಾಕಿಸ್ತಾನಕ್ಕೆ ಕೊಂಚ ನೆಮ್ಮದಿ ಸಿಕ್ಕಂತಾಗಿದೆ. ಕಳೆದ ಹಲವು ತಿಂಗಳುಗಳಿಂದ ಬೇಲ್‌ಔಟ್ ಪರಿಹಾರಕ್ಕಾಗಿ ಪರಿತಪಿಸುತ್ತಿರುವ ಪಾಕಿಸ್ತಾನಕ್ಕೆ ನಿನ್ನೆ ೩ ಶತಕೋಟಿ ಡಾಲರ್ ಮೊತ್ತದ ಪ್ಯಾಕೇಜ್‌ಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅನುಮೋದನೆ ನೀಡಿದೆ.
ಸದ್ಯ ಪಾತಾಳಕ್ಕೆ ಕುಸಿಯುತ್ತಿರುವ ಪಾಕಿಸ್ತಾನದ ಫಾರೆಕ್ಸ್ ರಿಸರ್ವ್‌ನಿಂದಾಗಿ ಅದು ಹೊರದೇಶಗಳಿಂದ ಆಮದು ಮಾಡಿಕೊಳ್ಳಲಾಗದ ಸ್ಥಿತಿಯನ್ನು ಕೂಡ ತಲುಪಿದೆ. ಈಗಾಗಲೇ ಐಎಂಎಫ್‌ನಿಂದ ೩ ಶತಕೋಟಿ ಡಾಲರ್ ಮೊತ್ತದ ಬಗ್ಗೆ ಭರವಸೆ ಸಿಕ್ಕಿದ್ದರೂ ಅನುಮೋದನೆ ಸಿಕ್ಕಿರಲಿಲ್ಲ. ಆದರೆ ನಿನ್ನೆ ತಡರಾತ್ರಿ ಈ ಬಗ್ಗೆ ಪಾಕ್‌ಗೆ ನೀಡಲಾಗುವ ಆರ್ಥಿಕ ನೆರವಿಗೆ ಅನುಮೋದನೆ ಲಭಿಸಿದೆ. ಇನ್ನು ಒಪ್ಪಂದದ ಪ್ರಕಾರ ತಕ್ಷಣಕ್ಕೆ ಪಾಕ್‌ಗೆ ಸುಮಾರು ೧.೨ ಶತಕೋಟಿ ಡಾಲರ್ ಲಭಿಸಲಿದ್ದು ಉಳಿದ ಮೊತ್ತ ಮುಂದಿನ ೯ ತಿಂಗಳುಗಳಲ್ಲಿ ನಿಧಾನವಾಗಿ ಲಭಿಸಲಿದೆ. ಆದರೆ ಕೊಂಚ ನೆಮ್ಮದಿಯ ಸಂಗತಿ ಎಂದರೆ ಅತ್ತ ಐಎಂಎಫ್ ತನ್ನ ಹಣಕಾಸಿನ ಪ್ಯಾಕೇಜ್ ಅನುಮೋದನ ನೀಡಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಹಾಗೂ ಯುಎಇ ಕೂಡ ತಮ್ಮ ತಮ್ಮ ನೆರವನ್ನು ಪಾಕಿಸ್ತಾನಕ್ಕೆ ಘೋಷಿಸಿದೆ. ಮಂಗಳವಾರ ಪಾಕಿಸ್ತಾನದ ಸೆಂಟ್ರಲ್ ಬ್ಯಾಂಕ್‌ನಲ್ಲಿ ಸೌದಿ ಅರೇಬಿಯಾವು ಸುಮಾರು ೨ ಶತಕೋಟಿ ಡಾಲರ್ ಮೊತ್ತವನ್ನು ಠೇವಣಿ ಇರಿಸಿದ್ದು, ಬಳಿಕ ಯುಎಇ ಕೂಡ ತನ್ನ ಮೊತ್ತ ಘೋಷಿಸಿದೆ. ಈಗಾಗಲೇ ದಿವಾಳಿಯತ್ತ ಸಾಗಿರುವ ಈ ದೊಡ್ಡ ಮೊತ್ತವೇ ಸಹಜವಾಗಿಯೇ ಹೆಚ್ಚಿನ ನೆರವು ನೀಡಿದೆ. ಆದರೆ ಇದು ಎಷ್ಟರ ಮಟ್ಟಿಗೆ ನೆರವು ನೀಡಲಿದೆ ಎಂಬುದಕ್ಕೆ ಮಾತ್ರ ಸೂಕ್ತ ಉತ್ತರವಿಲ್ಲ. ಯಾಕೆಂದರೆ ಪ್ರಸಕ್ತ ಹಣಕಾಸಿನ ವರ್ಷವೊಂದರಲ್ಲೇ ಪಾಕ್ ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಸುಮಾರು ೨೨ ಶತಕೋಟಿ ಡಾಲರ್ ಮೊತ್ತವನ್ನು ಮರುಪಾವತಿಸಬೇಕಿದ್ದು, ಹಾಗಾಗಿ ಐಎಂಎಫ್ ನೀಡಿರುವ ಮೊತ್ತ ಯಾವುದಕ್ಕೂ ಸಾಕಾಗುವುದಿಲ್ಲ. ಹಾಗಾಗಿ ಸದ್ಯ ಕೊಂಚ ಆರ್ಥಿಕ ನೆರವು ಲಭಿಸಿದ್ದರೂ ಮುಂದಿನ ದಿನಗಳಲ್ಲಿ ಪಾಕ್ ಆರ್ಥಿಕ ದಿವಾಳಿಯಾಗುವುದು ಬಹುತೇಕ ಖಚಿತ ಎಂಬ ಮಾತು ಜಾಗತಿಕ ತಜ್ಞರಿಂದ ಕೇಳಿ ಬರುತ್ತಿದೆ.

ಐಎಂಎಫ್‌ನ ಹಣಕಾಸಿನ ನೆರವು ಮಧ್ಯಮ ಅವಧಿಯ ಆರ್ಥಿಕ ಸವಾಲುಗಳ ವಿರುದ್ಧ ಗೆಲ್ಲಲು ಪಾಕಿಸ್ತಾನದ ಹಣಕಾಸಿನ ಸ್ಥಿತಿಯನ್ನು ಬಲಪಡಿಸುತ್ತದೆ. ಅಲ್ಲದೆ ಮುಂದೆ ಅಧಿಕಾರಕ್ಕೆ ಬರುವ ಸರಕಾರಕ್ಕೆ ಆರ್ಥಿಕ ಯೋಜನೆ ರೂಪಿಸಲು ಕೂಡ ನೆರವು ನೀಡುತ್ತದೆ. ಅದರಲ್ಲೂ ಮುಖ್ಯವಾಗಿ ಆರ್ಥಿಕತೆಯನ್ನು ಸ್ಥಿರಗೊಳಿಸುವ ಪ್ರಯತ್ನಗಳಲ್ಲಿ ಬೇಲ್‌ಔಟ್ ಪ್ಯಾಕೇಜ್ ಪ್ರಮುಖ ಹೆಜ್ಜೆಯಾಗಿದೆ.
-ಶೆಬಾಝ್ ಶರೀಫ್, ಪಾಕಿಸ್ತಾನ ಪ್ರಧಾನಿ