ಪಶ್ಚಿಮ ಬಂಗಾಳ ೭ನೇ ಹಂತದ ಮತದಾನ ಚುರುಕು

ಕೊಲ್ಕತ್ತ, ಏ. ೨೬-ದೇಶಾದ್ಯಂತ ಮಾರಕ ಕೊರೊನಾ ಸೋಂಕು ತೀವ್ರವಾಗಿ ಬಾಧಿಸುತ್ತಿರುವ ನಡುವೆಯೂ ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಯಲ್ಲಿಂದು ೭ನೇ ಹಂತದ ಮತದಾನ ಚುರುಕಿನಿಂದ ನಡೆಯುತ್ತಿದೆ.
೩೪ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಮುಕ್ತ ಹಾಗೂ ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗ ವ್ಯಾಪಕ ಬಂದೋಬಸ್ತ್ ಕೈಗೊಂಡಿದೆ.
ಕಳೆದ ಕೆಲವು ವಾರಗಳಿಂದ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ನಡುವೆಯೂ ಮತದಾರರು ಬೆಳಿಗ್ಗೆಯಿಂದಲೇ ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸುತ್ತಿರುವ ದೃಶ್ಯ ಕಂಡುಬಂದಿತು.
ಇದೇ ಮೊದಲ ಬಾರಿ ಮತದಾನ ಚಲಾಯಿಸುತ್ತಿರುವ ಯುವ ಮತದಾರರು ಗುರುತಿನ ಚೀಟಿಯನ್ನು ಕೈಯಲ್ಲಿ ಹಿಡಿದುಕೊಂಡು ತಮ್ಮ ಸರದಿಗಾಗಿ ಕಾಯುತ್ತಿದ್ದರು. ಬಿಸಿಲೇರುವ ಮುನ್ನ ಮತಗಟ್ಟೆ ಕೇಂದ್ರಕ್ಕೆ ಬಂದು ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು. ಹೊತ್ತು ಕಳೆಯುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತಗಟ್ಟೆ ಕೇಂದ್ರಕ್ಕೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ಮುಖಕ್ಕೆ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಂಡು ಸರದಿ ಸಾಲಿನಲ್ಲಿ ನಿಂತಿದ್ದರು.
೩೪ ವಿಧಾನಸಭಾ ಕ್ಷೇತ್ರಗಳಲ್ಲಿ ೨೮೪ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ತವರು ಕ್ಷೇತ್ರ ಭಬಾನಿಪುರ ಪ್ರಮುಖವಾಗಿದೆ. ಇಂದು ನಡೆದಿರುವ ಮತದಾನದಲ್ಲಿ ೮೬ ಲಕ್ಷಕ್ಕೂ ಅಧಿಕ ಮತದಾರರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.
ಮುರ್ಶಿದಾಬಾದ್, ಪಶ್ಚಿಮ ಬರ್ದಮಾನ್ ಜಿಲ್ಲೆಯ ೯ ಕ್ಷೇತ್ರಗಳು, ದಕ್ಷಿಣ್ ದಿನಜ್ ಪುರ್ ಹಾಗೂ ಮಲ್ದಗಳಲ್ಲಿ ತಲಾ ೬ ವಿಧಾನಸಭಾ ಕ್ಷೇತ್ರಗಳು ಹಾಗೂ ಕೊಲ್ಕತ್ತಾದ ನಾಲ್ಕು ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ಟಿಎಂಸಿ ಹಿರಿಯ ನಾಯಕ ಸೊಬಂದೇಬ್ ಚಟ್ಟೋಪಾಧ್ಯಾಯ ಭಬಾನಿಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಟಿಎಂಸಿ ತೊರೆದು ಬಿಜೆಪಿಗೆ ಸೇರಿರುವ ನಟ ರುದ್ರನಿಲ್ ಘೋಷ್,ಚಟ್ಟೋಪಾಧ್ಯಾಯ ವಿರುದ್ದ ಸ್ಪಧಿಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂದು ಬಿಜೆಪಿ ಪಣ ತೊಟ್ಟಿದೆ. ಆದರೆ ಚುನಾವಣಾ ಅಖಾಡದಲ್ಲಿ ಮಮತಾ ಬ್ಯಾನರ್ಜಿ ಸೆಡ್ಡು ಹೊಡೆದಿದ್ದು ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ರಾಜ್ಯದಲ್ಲಿ ಇನ್ನೂ ಒಂದು ಹಂತದ ಮತದಾನ ಬಾಕಿ ಉಳಿದಿದೆ. ಮೇ ೨ ರಂದು ಫಲಿತಾಂಶ ಪ್ರಕಟವಾಗಲಿದೆ.

ಪ್ರಧಾನಿ ಕರೆ
ಪಶ್ಚಿಮ ಬಂಗಾಳದಲ್ಲಿ ಏಳನೇ ಹಂತದ ಮತದಾನ ನಡಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಕೋವಿಡ್ ಶಿಷ್ಚಾಚಾರ ಪಾಲಿಸಿ ಮತಗಟ್ಟೆ ಕೇಂದ್ರಕ್ಕೆ ಬಂದು ತಮ್ಮ ಹಕ್ಕು ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.