ಸಂಜೆವಾಣಿ ವಾರ್ತೆ
ಶಿವಮೊಗ್ಗ, ಜು. 24; ಮಲೆನಾಡಿನಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಭಾನುವಾರ
ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಭಾರೀ ವರ್ಷಧಾರೆಯಾಗುತ್ತಿದೆ. ಇದರಿಂದ
ನದಿಗಳ ನೀರಿನ ಹರಿವಿನಲ್ಲಿ ಹೆಚ್ಚಳವಾಗಿದೆ. ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಗಣನೀಯ
ಏರಿಕೆ ಕಂಡುಬಂದಿದೆ.
ಭಾನುವಾರ ಬೆಳಿಗ್ಗೆಯ ಮಾಹಿತಿಯಂತೆ, ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ
ಕೇಂದ್ರವಾದ ಲಿಂಗನಮಕ್ಕಿ ಡ್ಯಾಂ ಒಳಹರಿವು 52,374 ಕ್ಯೂಸೆಕ್ ಗೆ ಏರಿಕೆಯಾಗಿದೆ.
1285 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಪ್ರಸ್ತುತ ಡ್ಯಾಂ ನೀರಿನ ಮಟ್ಟ
1770 (ಗರಿಷ್ಠ ಮಟ್ಟ : 1819) ಅಡಿಯಿದೆ.
ತುಂಗಾ ಡ್ಯಾಂ ಒಳಹರಿವು 42,719 ಕ್ಯೂಸೆಕ್ ಗೆ ಏರಿಕೆಯಾಗಿದೆ. ಈಗಾಗಲೇ ಡ್ಯಾಂ
ಗರಿಷ್ಠ ಮಟ್ಟ ತಲುಪಿರುವುದರಿಂದ, ಒಳಹರಿವಿನಷ್ಟೆ ನೀರನ್ನು ಹೊರ ಹರಿಸಲಾಗುತ್ತಿದೆ.
ಡ್ಯಾಂನ 21 ಕ್ರಸ್ಟ್ ಗೇಟ್ ತೆರೆದು ಹೊಸಪೇಟೆ ಟಿಬಿ ಡ್ಯಾಂಗೆ ನೀರು
ಹರಿಸಲಾಗುತ್ತಿದೆ.
ಉಳಿದಂತೆ ಭದ್ರಾ ಡ್ಯಾಂ ಜಲಾನಯನ ಪ್ರದೇಶದಲ್ಲಿಯೂ ವ್ಯಾಪಕ ಮಳೆಯಾಗುತ್ತಿದೆ. ಭಾನುವಾರ
ಬೆಳಿಗ್ಗೆಯ ಮಾಹಿತಿಯಂತೆ ಡ್ಯಾಂನ ಒಳಹರಿವು 12,169 ಕ್ಯೂಸೆಕ್ ಗೆ ಏರಿಕೆಯಾಗಿದೆ.
ಪ್ರಸ್ತುತ ಡ್ಯಾಂ ನೀರಿನ ಮಟ್ಟ 145 (ಗರಿಷ್ಠ ಮಟ್ಟ : 186) ಅಡಿಯಿದೆ.
ಮಳೆ ವಿವರ: ಭಾನುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ, ಕಳೆದ 24 ಗಂಟೆಗಳ
ಅವಧಿಯಲ್ಲಿ ಹೊಸನಗರದಲ್ಲಿ 140.2 ಮಿ.ಮೀ. (ಮಿಲಿ ಮೀಟರ್), ಸೊರಬ 83 ಮಿ.ಮೀ., ಸಾಗರ
77.8 ಮಿ.ಮೀ., ತೀರ್ಥಹಳ್ಳಿ 61.2 ಮಿ.ಮೀ., ಭದ್ರಾವತಿ 34.4 ಮಿ.ಮೀ., ಶಿಕಾರಿಪುರ
44.8 ಮಿ.ಮೀ., ಶಿವಮೊಗ್ಗದಲ್ಲಿ 12.4 ಮಿ.ಮೀ. ವರ್ಷಧಾರೆಯಾಗಿದೆ.
ಚುರುಕು: ಭಾನುವಾರ ಬೆಳಿಗ್ಗೆಯಿಂದ ಜಿಲ್ಲೆಯ ಘಟ್ಟ ಪ್ರದೇಶಗಳು ಸೇರಿದಂತೆ
ಜಿಲ್ಲೆಯಾದ್ಯಂತ ಮುಂಗಾರು ಮಳೆ ಮತ್ತಷ್ಟು ಚುರುಕುಗೊಂಡಿದೆ. ಹಲವೆಡೆ ಭಾರೀ
ವರ್ಷಧಾರೆಯಾಗುತ್ತಿರುವ ವರದಿಗಳು ಬಂದಿವೆ.