ಧಾರವಾಡ, ಮಾ.28: ರೈತ ದೇಶದ ಬೆನ್ನೆಲುಬಾದರೆ, ಜಾನುವಾರುಗಳು ರೈತನ ಬೆನ್ನೆಲುಬಾಗಿರುತ್ತವೆ. ಪಶು ಸಂಪತ್ತು ಅಭಿವೃದ್ಧಿಯಾದರೆ ಮಾತ್ರ ದೇಶ ಪ್ರಗತಿಯಲ್ಲಿ ಸಾಗುವುದು ಎಂದು ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಎಮ್. ವಿ. ಚಳಗೇರಿ ಅವರು ಹೇಳಿದರು.
ಧಾರವಾಡ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ತರಬೇತಿ ಕೇಂದ್ರದ ಸಹಯೋಗದೊಂದಿಗೆ ಮಾರ್ಚ್ 27, 2023 ರಿಂದ ಎಪ್ರೀಲ್ 01, 2023 ರವರೆಗೆ 06 ದಿನಗಳ ಕಾಲ ವಸತಿ ಸಹಿತ ಪಶು ಸಖಿಯರಿಗೆ “ಸಮಗ್ರ ಪಶುಸಂಗೋಪನೆಯ ತಾಂತ್ರಿಕ ವಿಷಯಗಳ” ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಪಶುಪಾಲನೆಯಲ್ಲಿನ ಇತ್ತೀಚಿನ ವೈಜ್ಞಾನಿಕ ಮತ್ತು ತಾಂತ್ರಿಕ ಬೆಳವಣಿಗೆಗಳು ಪಶು ಸಖಿಯರ ಮೂಲಕ ಗಾಮೀಣ ಜನಸಾಮಾನ್ಯರಿಗೂ ಸಹ ತಲುಪಬೇಕೆಂಬ ಆಶಾ ಭಾವನೆ ವ್ಯಕ್ತಪಡಿಸಿದರು.
ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಉಮೇಶ ಕೊಂಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ತರಬೇತಿಯಲ್ಲಿ ಪಾಲ್ಗೊಂಡ ಪಶು ಸಖಿಯರು, ಅವರ ಕರ್ತವ್ಯಗಳೊಂದಿಗೆ ಇಲಾಖೆಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇಲಾಖೆಯ ಯೋಜನೆಗಳನ್ನು, ಪಶುಪಾಲನೆಯಲ್ಲಿ ತಾಂತ್ರಿಕ ವಿಷಯಗಳನ್ನು ವಿಸ್ತರಣಾ ಕಾರ್ಯಕ್ರಮಗಳ ಮೂಲಕ ರೈತರ ಮನೆಬಾಗಿಲಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಬೇಕು ಎಂದರು.
ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಸಂಜೀವಿನಿ (ಡೇ-ಎನ್‍ಆರ್‍ಎಲ್‍ಎಂ) ಮಹೇಶ. ಪಾಟೀಲ.ಡಿ.ಎಂ. ಹಾಗೂ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ಪ್ರಮೋದ. ಮೂಡಲಗಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ತರಬೇತಿ ಕೇಂದ್ರದ ಮುಖ್ಯ ಪಶುವೈದ್ಯಾಧಿಕಾರಿ ಡಾ. ಸುನೀಲ ಬನ್ನಿಗೋಳ ಅವರು ಸ್ವಾಗತಿಸಿದರು. ತರಬೇತಿಯಲ್ಲಿ ಕುಂದಗೋಳ, ನವಲಗುಂದ ಕಲಘಟಗಿ, ತಾಲೂಕಿನ 28 ಪಶು ಸಖಿಯರು, ಪಶುಪಾಲನಾ ತರಬೇತಿ ಕೇಂದ್ರದಲ್ಲಿ ನಡೆದ ತರಬೇತಿಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಮಾಹಾದೇವಿ. ಅಂಗ್ರೋಳ್ಳಿ ನಿರೂಪಿಸಿ, ವಂದಿಸಿದರು.