ಪಶು ಸಂಪತ್ತಿನಿಂದ ಸದೃಢ ದೇಶ ನಿರ್ಮಾಣ

ಕಲಬುರಗಿ,ಏ. 24: ಭಾರತ ಕೃಷಿ ಪ್ರಧಾನವಾದ ದೇಶವಾಗಿದೆ. ದನ-ಕರುಗಳು, ಆಡು-ಮೇಕೆ ಸೇರಿದಂತೆ ಮುಂತಾದ ಪಶು ಸಂಪತ್ತಿನ ಸಂರಕ್ಷಣೆ ಅಗತ್ಯವಾಗಿದೆ. ರೈತರು ಕೇವಲ ಒಕ್ಕುಲತನದ ಮೇಲೆಯೆ ಸಂಪೂರ್ಣ ಅವಲಂಬಿತವಾಗಿರದೆ, ಕೃಷಿ ಪೂರಕ ಚಟುವಟಿಕೆಗಳಾದ ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ಮಾಡಬೇಕು. ಇದರಿಂದ ರೈತರು ಸಬಲರಾಗುವದರ ಜೊತೆಗೆ ದೇಶ ಸದೃಢವಾಗಲು ಸಾಧ್ಯವಿದೆಯೆಂದು ಹಿರಿಯ ಪಶುವೈದ್ಯ ನೀಲಪ್ಪ ಎಸ್.ಚಿಂಚೂರ ಹೇಳಿದರು.
ನಗರದ ಜೆ.ಆರ್ ನಗರದಲ್ಲಿರುವ ತಮ್ಮ ಮನೆಯ ಪ್ರಾಂಗಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದಿಂದ ಸರಳವಾಗಿ ಜರುಗಿದ ‘ವಿಶ್ವ ಪಶು ವೈದ್ಯಕೀಯ ದಿನಾಚರಣೆ’ಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಪಶುಗಳಿಗೆ ಸಾಮಾನ್ಯವಾಗಿ ಕಾಲು-ಬಾಯಿ ಜ್ವರ, ಚಪ್ಪೆಬೇನೆ, ಗಂಟಲು ನೋವು, ಹುಚ್ಚುನಾಯಿ ರೋಗ, ಕುರಿ-ಮೇಕೆಗಳಲ್ಲಿ ಬರುವ ಕರಳುಬೇನೆ ಕಾಯಿಲೆ, ಕೋಳಿಗಳಿಗೆ ಕೊಕ್ಕರೆ ರೋಗ ಇವುಇಗಳು ಸಾಮಾನ್ಯವಾಗಿ ಬರುವ ರೋಗಗಳಾಗಿವೆ. ಇದರ ಬಗ್ಗೆ ಮುಂಜಾಗ್ರತೆ ವಹಿಸಿ, ಸೂಕ್ತ ಚಿಕಿತ್ಸೆ ಕೊಡಿಸುವ ಮೂಲಕ ಪಶುಗಳನ್ನು ರಕ್ಷಿಸಬೇಕು. ಅನೇಕ ಯುವಕರಿಗೆ ಪಶು ಸಂಗೋಪನೆಯು ನಿರುದ್ಯೋಗವನ್ನು ಹೋಗಲಾಡಿಸಿ, ಸ್ವಾವಲಂಬಿ ಬದುಕು ನಿರ್ಮಾಣಕ್ಕೆ ಸಹಕಾರಿಯಾಗಿದೆಯೆಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ಅಣ್ಣಾರಾಯ ಎಚ್.ಮಂಗಾಣೆ, ದೇವೇಂದ್ರಪ್ಪ ಗಣಮುಖಿ, ಶಿವಕುಮಾರ ತಿಮಾಜಿ, ಸುಭಾಷ ನಿಂಬಾಳ, ಶ್ರೀದೇವಿ ಎನ್.ಚಿಂಚೂರ್ ಇದ್ದರು.