`ಪಶು ಸಂಜೀವಿನಿ’ ಚಿಕಿತ್ಸಾ ವಾಹನಕ್ಕೆ ಚಾಲನೆ

ಅಣ್ಣಿಗೇರಿ, ಆ 2: ಪಂಪ ಸ್ಮಾರಕ ಭವನದಲ್ಲಿ ಏರ್ಪಡಿಸಿದ್ದ ಪಟ್ಟಣದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ಹಾಗೂ ವಿವಿಧ ಯೋಜನೆಗಳ ಪ್ರಗತಿ ಕುರಿತು ಪರಿಶೀಲನೆ, ಹಲವು ಹೊಸ ಯೋಜನೆಗಳಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ, ಬೆಂಕಿ ಆಕಸ್ಮಿಕದಿಂದ ಸುಟ್ಟು ನಷ್ಟ ಹೊಂದಿದ ಬೆಳೆ, ಬಣವಿಗಳ ರೈತ ಕುಟುಂಬಗಳಿಗೆ ಮತ್ತು ಸ್ಮಶಾನದ ನಿರ್ಮಾಣಕ್ಕಾಗಿ ಭೂಮಿ ಒದಗಿಸಿದ ರೈತರಿಗೆ ಸರ್ಕಾರದ ವತಿಯಿಂದ ಪರಿಹಾರದ ಚೆಕ್ ವಿತರಿಸಲಾಯಿತು.
ಪಶುಪಾಲನಾ ಮತ್ತು ಹೈನುಗಾರಿಕೆ ಇಲಾಖೆ, ಭಾರತ ಸರ್ಕಾರದ ಆರ್ಥಿಕ ನೆರವಿನಿಂದ ಅಣ್ಣಿಗೇರಿ ಹಾಗೂ ನವಲಗುಂದ ನಗರಕ್ಕೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕೇಂದ್ರ ಪುರಸ್ಕೃತ ಯೋಜನೆ- “ಪಶು ಸಂಜೀವಿನಿ” ಎಂಬ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಈ ಯೋಜನೆ ರೈತ ಕುಟುಂಬಗಳ, ಜಾನುವಾರುಗಳ ಆರೋಗ್ಯ ರಕ್ಷಣೆಗಾಗಿ ಕೈಗೊಂಡಿರುವ ಯೋಜನೆಯಾಗಿದ್ದು, ಇದರಿಂದ ಜಾನುವಾರುಗಳಿಗೆ ತುರ್ತು ಸಂದರ್ಭದಲ್ಲಿ ಅಗತ್ಯ ಚಿಕಿತ್ಸೆ ಒದಗಿಸಲು ಸಾಧ್ಯವಾಗುತ್ತದೆ ಇದು ದೇಶದಲ್ಲೇ ಮೊದಲ ಯೋಜನೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಗಂಗಾ ಕರೆಟ್ಟನವರ, ಉಪಾಧ್ಯಕ್ಷರಾದ ಜಯಲಕ್ಷ್ಮಿ ಜಕರೆಡ್ಡಿ, ಚೇರ್ಮನ್ ಬಾಬಾಜಾನ ಮುಲ್ಲನವರ, ತಹಶಿಲ್ದಾರರಾದ ಅನೀಲ ಬಡಿಗೇರ, ತಾಲೂಕು ಪಂಚಾಯತ್ ಎಇಓ ಕಾಂಬಳೆ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ನಿಡವಣಿ, ಪುರಸಭೆ ಸದಸ್ಯರುಗಳು, ತಾಲೂಕು ಅಧಿಕಾರಿ ವರ್ಗದವರು, ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.