
ಕೋಲಾರ,ಸೆ,೧:ರಾಜ್ಯದಲ್ಲಿ ಪಶುಶೈದ್ಯರ ಕೊರತೆ ತೀವ್ರವಾಗಿ ಕಾಡುತ್ತಿದ್ದು, ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಜಾನುವಾರುಗಳು ರೋಗ – ರುಜಿನಗಳಿಗೆ, ಅಂಟುಜಾಡ್ಯಕ್ಕೆ ಬಲಿಯಾಗುತ್ತಿದೆ, ಮೂಕ ಪ್ರಾಣಿಗಳ ಈ ರೋಧನೆಗಳು ಯಾರಿಗೂ ಕೇಳದಾಗಿದೆ.
ಶೀಘ್ರದಲ್ಲೇ ೪೦೦ ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ಸರ್ಕಾರ ಕೊಡಲೇ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಬ್ಯಾಲಹಳ್ಳಿ ಹೇಮಂತ್ ಕುಮಾರ್ ಒತ್ತಾಯಿಸಿದರು.
ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಜ್ಯದಲ್ಲಿ ಒಟ್ಟು ೧೫೭೨ ಮಂಜೂರಾದ ಪಶುವೈದ್ಯಾಧಿಕಾರಿ ಹುದ್ದೆಗಳಿವೆ ಅದರಲ್ಲಿ ಕೇವಲ ೫೫೯ ಪಶುವೈದ್ಯಾಧಿಕಾರಿ ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಇದರಿಂದಾಗಿ ೬೦ ಸಾವಿರ ರಾಸುಗಳಿಗೆ ಕೇವಲ ಒಬ್ಬರು ಪಶುವೈದ್ಯರು ಲಭ್ಯವಿದ್ದು, ಪಶುಗಳಿಗೆ ಸರಿಯಾದ ಚಿಕಿತ್ಸೆ ಸಿಗದೆ ರೈತರು ಕಂಗಾಲಾಗಿದ್ದಾರೆ.
ಇಲಾಖೆಯಲ್ಲಿ ಕಳೆದ ಆರು ವರ್ಷಗಳಿಂದ ನೇಮಕಾತಿ ಆಗದೆ ಒಟ್ಟು ೧೨೯೭ ತಜ್ಞ ವೈದ್ಯರು ಹಾಗೂ ಪಶುವೈದ್ಯಾಧಿಕಾರಿ ಹುದ್ದೆಗಳು ಖಾಲಿ ಇದೆ . ೪೦೦ ಪಶುವೈದ್ಯಾಧಿಕಾರಿಗಳ ನೇರ ನೇಮಕಾತಿಯು ಗೊಂದಲದ ಗೂಡಾಗಿದೆ.
ಪಶುಪಾಲನ ಮತ್ತು ಪಶು ವೈದ್ಯ ಸೇವಾ ಇಲಾಖೆಯು ವಿಶೇಷ ನೇಮಕಾತಿ ನಿಯಮಗಳ ಅಡಿಯಲ್ಲಿ ಮಾರ್ಚ್ ೮ ೨೦೨೨ ರಂದು ಅಧಿಸೂಚನೆ ಹೊರಡಿಸಿತ್ತು ಹಾಗೂ ಅರ್ಹತಾ ಪರೀಕ್ಷೆ ಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲು ತೀರ್ಮಾನಿಸಲಾಗಿತ್ತು.
ಆದರೆ ಇದನ್ನು ಪ್ರಶ್ನಿಸಿ ಕೆಲವು ಅಭ್ಯರ್ಥಿಗಳು ರಾಜ್ಯ ಆಡಳಿತ ನ್ಯಾಯ ಮಂಡಳಿ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯ ಮಂಡಳಿ ಕಳೆದ ೨೦೨೩ ಫೆಬ್ರವರಿ ೧೫ ರಂದು ವಿಶೇಷ ನೇಮಕಾತಿ ನಿಯಮವನ್ನು ರದ್ದು ಮಾಡಿತ್ತು.
ಇನ್ನು ರಾಜ್ಯ ಆಡಳಿತ ನ್ಯಾಯ ಮಂಡಳಿ ತೀರ್ಪಿನಂತೆ ಇಲಾಖೆಯು ಕರ್ನಾಟಕ ಲೋಕ ಸೇವಾ ಆಯೋಗದ ಮೂಲಕ ನೇಮಕಾತಿ ಮಾಡಿಕೊಳ್ಳಲು ತೀರ್ಮಾನಿಸಲಾಗಿತ್ತು. ಇದನ್ನು ಪ್ರಶ್ನಿಸಿ ಕೆಲ ಅಭ್ಯರ್ಥಿಗಳು ಮಾನ್ಯ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಸದ್ಯ ನೇಮಕಾತಿ ಪ್ರಕರಣ ಉಚ್ಚ ನ್ಯಾಯಾಲಯದ ಅಂಗಳದಲ್ಲಿದೆ. ಕರ್ನಾಟಕ ಲೋಕ ಸೇವಾ ಆಯೋಗದ ಮೂಲಕ ನೇಮಕಾತಿಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ ಹಾಗೂ ವಿಶೇಷ ನಿಯಮದ ನೇಮಕಾತಿಯನ್ನು ಇಲಾಖೆಯು ಮುಂದುವರಿಸಬಹುದು ಎಂದು ಹೇಳಿದೆ.