ಪಶು ಚಿಕಿತ್ಸಾ ಕೇಂದ್ರ ಮುಚ್ಚಿ ಪ್ರತಿಭಟನೆ

ಕೆ.ಆರ್.ಪುರ,ಡಿ.೨೯- ಕೆ.ಆರ್.ಪುರ ವ್ಯಾಪ್ತಿಯಲ್ಲಿನ ಕಲ್ಕೆರೆ ಗ್ರಾಮದಲ್ಲಿ ಪಶು ಚಿಕಿತ್ಸಾ ಕೇಂದ್ರವನ್ನು ಬೇರೆ ಜಿಲ್ಲೆಗೆ ಸ್ಥಳಾಂತರಕ್ಕೆ ಆದೇಶ ಹೊರಡಿಸಿರುವ ಸರ್ಕಾರ ಕ್ರಮವನ್ನು ವಿರೋಧಿಸಿ ಪಶು ಚಿಕಿತ್ಸೆ ಕೇಂದ್ರಕ್ಕೆ ಬೀಗ ಜಡಿದು ರೈತರು ಪ್ರತಿಭಟನೆ ನಡೆಸಿದರು.
ಸುಮಾರು ೪೦ ವರ್ಷಗಳಿಂದ ಪಶು ಚಿಕಿತ್ಸಾ ಕೇಂದ್ರವಿದ್ದು, ಕಲ್ಕೆರೆ ಗ್ರಾಮ ಸುತ್ತಮುತ್ತಲಿನ ಗ್ರಾಮಗಳಾದ ಕನಕನಗರ, ಚನ್ನಸಂದ್ರ, ಜಯಂತಿನಗರ, ಶಾಂತಿ ಲೇಔಟ್, ಮಾರಗೊಂಡನಹಳ್ಳಿ,ಮುನೇಶ್ವರ ನಗರ ಸುಮಾರು ಏಳೆಂಟು ಹಳ್ಳಿಗಳಲ್ಲಿ ಸುಮಾರು ೨೭೦೦೦ ಸಾವಿರಕ್ಕೂ ಅಧಿಕ ಪಶುಗಳಿವೆ. ಹಸು, ಎಮ್ಮೆ, ಕುರಿ, ಮೇಕೆ, ನಾಯಿ, ಬೆಕ್ಕು ಸಾಕಾಣಿಕೆ ನೆಚ್ಚಿಕೊಂಡಿದ್ದೇವೆ. ಗ್ರಾಮಗಳಲ್ಲಿ ಸರ್ವೆ ಮಾಡದೆ ಪಶುಗಳು ಕಡಿಮೆಯಾಗಿದೆ ಎನ್ನುವ ನೆಪ ಮಾಡಿ ಪಶು ಚಿಕಿತ್ಸೆ ಕೇಂದ್ರ ರಾಯಚೂರು ಜಿಲ್ಲೆಗೆ ಸ್ಥಳಾಂತರ ಮಾಡಲಾಗಿದೆ. ಈಗಿನ ಪಶು ಚಿಕಿತ್ಸಾ ಕೇಂದ್ರ ಸ್ಥಳಾಂತರ ಮಾಡಿದರೆ ಹೆಣ್ಣೂರು,ಕೆ.ಆರ್.ಪುರ ಪಶು ಆಸ್ಪತ್ರೆಗೆ ತೆರಳಬೇಕಾಗುತ್ತದೆ ಇದರಿಂದ ಏಳೆಂಟು ಕಿಮೀ ಸುತ್ತಬೇಕಾಗುತ್ತದೆ ಎಂದು ಕಮಲಮ್ಮ ದೂರಿದರು.
ಕಲ್ಕೆರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾವಿರಾರು ಕುಟುಂಬಗಳು ಹೈನುಗಾರಿಕೆ ನೆಚ್ಚಿಕೊಂಡು ಉಪ ಜೀವನ ನಡೆಸುತ್ತಿದ್ದೇವೆ ಹೈನುಗಾರಿಕೆ ನೆಚ್ಚಿಕೊಂಡು ಜೀವನ ನಡೆಸುತ್ತಿರುವ ರೈತರನ್ನು ಬೀದಿ ಪಾಲು ಮಾಡಲು ಸರ್ಕಾರ ಮುಂದಾಗಿದ್ದು, ಅವೈಜ್ಞಾನಿಕವಾಗಿ ಸರ್ವೆ ನಡೆಸಿ ಸರ್ಕಾರಕ್ಕೆ ಅಧಿಕಾರಿಗಳು ತಪ್ಪು ಮಾಹಿತಿ ಮೂಲಕ ಪಶು ಚಿಕಿತ್ಸಾ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತಾರ ವ್ಯವಸ್ಥಿತ ಹುನ್ನಾರ ಮಡಲಾಗಿದೆ ಎಂದು ರತ್ಮಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಮೂವತ್ತು ವರ್ಷಗಳಿಂದ ಪಶುಪಾಲನೆ ಮಾಡಿಕೊಂಡು ಬಂದಿದ್ದು, ನಮ್ಮ ಮನೆಯಲ್ಲಿ ಈಗಲೂ ೩೫ ರಾಸುಗಳು ಸಾಕಾಣಿಕೆ ಮಾಡುತ್ತಿದ್ದೇವೆ ನಮಗೆ ಜಮೀನು ಇರುವುದಿಲ್ಲ, ಬೇರೆ ಉದ್ಯೋಗವಿಲ್ಲ ಜಾನುವಾರಗಳನ್ನೇ ಆಶ್ರಯಿಸಿದ್ದೇವೆ ಪಶು ಚಿಕಿತ್ಸಾ ಕೇಂದ್ರ ಮುಚ್ಚಿದರೆ ನಾವು ಜಾನುವಾರುಗಳನ್ನು ಮಾರಾಟ ಮಾಡಬೇಕಾಗುತ್ತದೆ ಯಾವುದೇ ಕಾರಣಕ್ಕೂ ಪಶು ಚಿಕಿತ್ಸಾ ಕೇಂದ್ರ ಸ್ಥಳಾಂತರ ಮಾಡಿದರೆ ಜಾನುವಾರ ಗಳೊಂದಿಗೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು