ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 19ನೇ ಸಂಸ್ಥಾಪನಾ ದಿನಾಚರಣೆ

ಬೀದರ:ಜ.18:ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ಇದರ 19ನೇ ಸಂಸ್ಥಾಪನಾ ದಿನಾಚರಣೆಯನ್ನು ಕಪಪಮಿವಿವಿ, ಬೀದರನ ನಂದಿನಗರ ಆವರಣದಲ್ಲಿ ವಿಜೃಂಬಣೆಯಿಂದ ಆಚರಿಸಲಾಯಿತು. ತೆಲಂಗಾಣದ ಪಟಂಚೇರುನಲ್ಲಿರುವ ಇಕ್ರಿಸ್ಯಾಟ್‍ನ ಪ್ರಧಾನ ವಿಜ್ಞಾನಿ ಮತ್ತು ಕಾರ್ಯತಂತ್ರದ ಸಲಹೆಗಾರರಾದ ಡಾ|| ಶ್ರೀನಾಥ ದಿಕ್ಷಿತ್ ಇವರು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರೆ, ಬೀದರ ಜಿಲ್ಲೆಯ ಜಿಲಾಧಿಕಾರಿಗಳಾದ ಶ್ರೀ ಗೋವಿಂದ ರೆಡ್ಡಿ ಭಾಆಸೇ ಇವರು ಗೌರವ ಅತಿಥಿಗಳಾಗಿ ಭಾಗವಹಿಸಿದರು ಹಾಗೂ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ|| ಕೆ.ಸಿ. ವೀರಣ್ಣರವರು ಅಧ್ಯಕ್ಷತೆ ವಹಿಸಿದ್ದರು ಹಾಗೂ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿಯ ಸದಸ್ಯರುಗಳಾದ ಶ್ರೀ. ಭೋಜ್ಯಾನಾಯ್ಕ್, ಶ್ರೀ. ವಸಂತ ಬಿರಾದಾರ, ಶ್ರೀಮತಿ. ಲತಾ, ಡಿ.ಹೆಚ್. ಮತ್ತು ಡಾ|| ವೆಂಕಟಾಚಲ, ವ್ಹಿ.ಎಸ್. ಇವರು ಅತಿಥಿಗಳಾಗಿ ಭಾಗವಹಿಸಿದ್ದರು. ಸದರಿ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಅಹ್ವಾನಿತರು ಹಾಗೂ ರೈತ ಬಾಂದವರು ಭಾಗವಹಿಸಿದರು.

ಮುಖ್ಯ ಅತಿಥಿಗಳಾದ ಡಾ|| ಶ್ರೀನಾಥ ದಿಕ್ಷಿತ್ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಜೀವನೋಪಾಯದ ಸುಭದ್ರತೆಗಾಗಿ ಪಶುಸಂಗೋಪನೆ ಚಟುವಟಿಕೆಗಳನ್ನು ಅಳವಡಿಸಿಕಿಳ್ಳಲು ಕರೆಕೊಟ್ಟರು. ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ|| ಕೆ.ಸಿ. ವೀರಣ್ಣನವರು ಮಾತನಾಡುತ್ತಾ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ವಿಶ್ವವಿದ್ಯಾಲಯವು ಮುಂದಿನ ದಿನಗಳಲ್ಲಿ ಹೆಚ್ಚು ಒಟ್ಟು ಕೊಡುವದಾಗಿ ಹೇಳಿದರು.

ವಿಶ್ವವಿದ್ಯಾಲಯದ 19ನೇ ಕಾರ್ಯಕ್ರಮದ ಅಂಗವಾಗಿ “ಅತ್ಯುತ್ತಮ ಶಿಕ್ಷಕ” ಪ್ರಶಸ್ತಿಯನ್ನು ಡಾ|| ಎನ್.ಬಿ. ಶ್ರೀಧರ, ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇವರಿಗೆ ನೀಡಿ ಸನ್ಮಾನಿಸಲಾಯಿತು ಹಾಗೂ “ಅತ್ಯುತ್ತಮ ಶಿಕ್ಷಕೇತರ ಸಿಬ್ಬಂದಿ” ಪ್ರಶಸ್ತಿಯನ್ನು ಶ್ರೀ. ಪ್ರಭಾಕರ್, ಎಸ್.ವಿ., ಹಿರಿಯ ಟೆಲಿಫೋನ್ ಆಪರೇಟರ್, ಪಶುವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು ಇವರಿಗೆ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ “ಅತ್ಯುತ್ತಮ ಕೃಷಿಕ” ಪ್ರಶಸ್ತಿಯನ್ನು ಶ್ರೀ. ಸಂತೋಷ ಉಮಾಕಾಂತ ಪಾಟೀಲ್, ಮು|| ಚಿದ್ರಿ, ಬೀದರ ಜಿಲ್ಲೆ ಇವರಿಗೆ ನೀಡಿದರೆ, “ಅತ್ಯುತ್ತಮ ಕೃಷಿಕ ಮಹಿಳೆ” ಪ್ರಶಸ್ತಿಯನ್ನು ಶ್ರೀಮತಿ. ಗೀತಾ ಮಾರುತಿ ಖಾಶೆಂಪೂರೆ, ಮು|| ಖಾಶೇಂಪೂರ, ಬೀದರ ಜಿಲ್ಲೆ ಇವರಿಗೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಬಾಹ್ಯ ಸಂಸ್ಥೆಗಳಿಂದ ಪಡೆದ ಅನುದಾನಕ್ಕಾಗಿ ಹಾಗೂ ಅವರ ಗಮನಾರ್ಹ ಕೊಡುಗೆ ಗುರುತಿಸಿ ವಿಶ್ವವಿದ್ಯಾಲಯದ ಒಟ್ಟು 8 ಪ್ರಧಾನ ಸಂಶೋಧಕರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ, ರೈತರು ಮತ್ತು ಪಶುವೈದ್ಯಾಧಿಕಾರಿಗಳಿಗಾಗಿ ಬರಗಾಲ ನಿರ್ವಹಣೆ ಕುರಿತು ಎರಡು ದಿನಗಳ ಕಾರ್ಯಾಗಾರ ಮತ್ತು ವಸ್ತು ಪ್ರದರ್ಶನವನ್ನು ಹಮಿಕೊಳ್ಳಲಾಯಿತು.