ಪಶುಪಾಲನೆ ಇಲಾಖೆ ಸಿಬ್ಬಂದಿಗೆ ಲಸಿಕೆ: ಸಚಿವ ಪ್ರಭು ಚವ್ಹಾಣ್ ಚಾಲನೆ

ಬೀದರ:ಮೇ.30: ಪಶು ಪಾಲನೆ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆಯ ಸಿಬ್ಬಂದಿಗೆ ನೀಡಲಾಗುತ್ತಿರುವ ಕೋವಿಡ್ ಲಸಿಕಾಕರಣ ಕಾರ್ಯಕ್ರಮಕ್ಕೆ ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಮೇ.29ರಂದು ಜಿಲ್ಲಾ ಉಸ್ತುವಾರಿ ಸಚಿವರ ಕಛೇರಿ ಆವರಣದಲ್ಲಿ ಚಾಲನೆ ನೀಡಿದರು.
ಬೀದರ ಜಿಲ್ಲೆಯಲ್ಲಿ ಪಸುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಒಟ್ಟು 403 ಜನ ಸಿಬ್ಬಂದಿಗಳಿದ್ದು, ಸಾಂಕೇತಿಕವಾಗಿ 27 ಜನ ಸಿಬ್ಬಂದಿಗೆ ಸಾಂಕೇತಿಕವಾಗಿ ಲಸಿಕೆ ನೀಡಲಾಯಿತು.
ಈ ವೇಳೆ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮಯೋಚಿತ ನಿರ್ಧಾರಗಳು, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಪ್ರಯತ್ನ ಹಾಗೂ ಎಲ್ಲರ ಸಹಕಾರದಿಂದ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ದಯವಿಟ್ಟು ಎಲ್ಲರೂ ತಪ್ಪದೇ ಲಸಿಕೆ ಪಡೆದುಕೊಳ್ಳಬೇಕು. ಕೋವಿಡ್ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸಬೇಕು. ಬೀದರ ಜಿಲ್ಲೆಯನ್ನು ಕೋವಿಡ್ ಮುಕ್ತವಾಗಿಸಬೇಕು ಎಂದು ತಿಳಿಸಿದರು.
ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಎಲ್ಲ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗೆ ಲಸಿಕೆ ಹಾಕಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ಬೇಡ ಎಂದು ಸಿಬ್ಬಂದಿಗೆ ಸಚಿವರು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ರಾಜಶೇಖರ ಪಾಟೀಲ, ಬೀದರ ನಗರಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬು ವಾಲಿ, ತಹಸೀಲ್ದಾರರಾದ ಹೆಚ್.ಗಂಗಾದೇವಿ, ಇಲಾಖೆಯ ಉಪ ನಿರ್ದೇಶಕರಾದ ಡಾ.ರವೀಂದ್ರ ಭುರೆ, ಡಾ.ಗೌತಮ ಅರಳಿ, ಡಾ.ನರಸಪ್ಪ, ಡಾ.ರಘುವೀರ ಪ್ರಸಾದ, ಯಲಗೌಡ, ಡಾ.ಸಂಗಮೇಶ, ಡಾ.ನೀಲಕಂಠ ಚೆನ್ನಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.