ಪವಿತ್ರ ಮೃತ್ತಿಕಾ ಸಂಗ್ರಹ ಅಭಿಯಾನ ಸಂಪನ್ನ

ಬೆಂಗಳೂರು, ನ. ೯- ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ೧೦೮ ಅಡಿ ಎತ್ತರದ ಕಂಚಿನ ಪ್ರತಿಮೆ ಲೋಕಾರ್ಪಣೆ ಭಾಗವಾಗಿ ೧೫ ದಿನಗಳ ಕಾಲ ರಾಜ್ಯಾದ್ಯಂತ ನಡೆದ ಪವಿತ್ರ ಮೃತ್ತಿಕಾ ಸಂಗ್ರಹಣಾ ಅಭಿಯಾನ ಇಂದು ಸಂಪನ್ನಗೊಂಡಿತು.
ಇಂದು ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸಿಕೊಂಡು ಬಂದಿರುವ ವಿಶೇಷ ರಥಗಳನ್ನು ಬರ ಮಾಡಿಕೊಂಡು, ಪವಿತ್ರ ಮೃತ್ತಿಕೆಯನ್ನು ಸ್ವೀಕರಿಸಲಾಯಿತು.
ಕೆಂಪೇಗೌಡ ವಿಮಾನ ನಿಲ್ದಾಣದ ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ಮುಂಭಾಗ ಪವಿತ್ರ ಮೃತ್ತಿಕೆ ಸಂಗ್ರಹ ಕಾರ್ಯಕ್ರಮ ಇಂದು ಬೆಳಗ್ಗೆ ವಿಧಿ ಬದ್ಧವಾಗಿ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಸಚಿವರಾದ ಆರ್. ಅಶೋಕ್, ಡಾ.ಸಿ.ಎನ್. ಅಶ್ವತ್ಥ್‌ನಾರಾಯಣ, ಡಾ.ಕೆ.ಸುಧಾಕರ್, ಶಾಸಕ ಎಸ್.ಆರ್.ವಿಶ್ವನಾಥ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಈ ಪವಿತ್ರ ಮೃತ್ತಿಕೆಯನ್ನು ಕೆಂಪೇಗೌಡರ ಪ್ರತಿಮೆ ಮುಂಭಾಗ ನಿರ್ಮಾಣಗೊಳ್ಳುತ್ತಿರುವ ಥೀಂ ಪಾರ್ಕ್ ಹಾಗೂ ಪ್ರತಿಮೆಯ ನಾಲ್ಕು ಗೋಪುರಗಳಿಗೂ ಸಾಂಕೇತಿಕವಾಗಿ ಸಮರ್ಪಿಸಲಾಯಿತು.
ಕಳೆದ ೧೫ ದಿನಗಳಿಂದ ರಾಜ್ಯಾದ್ಯಂತ ಪವಿತ್ರ, ಐತಿಹಾಸಿಕ ಸ್ಥಳಗಳು, ವಿವಿಧ ಜಿಲ್ಲೆಗಳ ನದಿ, ಕೆರೆಗಳಿಂದ ಹಾಗೂ ಇತಿಹಾಸ ಪುರುಷರ ಸಮಾಧಿ ಸ್ಥಳದಿಂದ ಮೃತ್ತಿಕೆ ಸಂಗ್ರಹಿಸುವ ಕಾರ್ಯ ನಡೆದಿತ್ತು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ. ಸಿ.ಎನ್. ಅಶ್ವತ್ಥ್‌ನಾರಾಯಣ ಅವರು, ಕೆಂಪೇಗೌಡರ ಹೆಸರು ಇಡೀ ಕರ್ನಾಟಕದಲ್ಲಿ ಅಖಂಡತೆಯ ಭಾವನೆಯನ್ನು ಮೂಡಿಸಬೇಕು ಎಂಬ ಉದ್ದೇಶದಿಂದ ೧೫ ದಿನಗಳ ಕಾಲ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಸಿದ್ಧಪಡಿಸಿದ್ದ ೨೧ ವಿಶೇಷ ರಥಗಳು ನಾಡಿನ ೨೨ ಸಾವಿರ ಸ್ಥಳಗಳಿಗೆ ಹೋಗಿ ಬಂದಿವೆ ಎಂದರು.
ಈ ರಥಗಳು ೩.೬೧ ಕೋಟಿಗೂ. ಹೆಚ್ಚು ಜನರನ್ನು ಸಂಪರ್ಕಿಸಿದ್ದು ೨೦ ಸಾವಿರ ಕಿ.ಮೀ.ಗೂ ಹೆಚ್ಚು ದೂರವನ್ನು ಕ್ರಮಿಸಿವೆ ಎಂದರು.