ಬೀದರ್: ಎ.8:ಪವಿತ್ರ ಮನಸ್ಸಿಗೆ ಭಗವಂತ ಒಲಿಯುತ್ತಾನೆ ಎಂದು ಹಲಬರ್ಗಾ-ಶಿವಣಿ-ಹೈದರಾಬಾದ್ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯ ಹೇಳಿದರು.
ಹುಣ್ಣಿಮೆ ಪ್ರಯುಕ್ತ ಹೈದರಾಬಾದ್‍ನ ಜಿಯಾಗುಡಾದ ನಾಗಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಜೀವನ ದರ್ಶನ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮನಸ್ಸಿನಲ್ಲಿ ಕೆಟ್ಟ ಆಲೋಚನೆ ತುಂಬಿಕೊಂಡಿರುವವರು ಎಷ್ಟೇ ಪೂಜೆ, ಧ್ಯಾನ ಮಾಡಿದರೂ ವ್ಯರ್ಥ. ಅಂಥವರಿಗೆ ದೇವರ ಕೃಪೆ ಆಗದು ಎಂದರು.
ಮನುಷ್ಯ ಅಂತರಂಗ, ಬಹಿರಂಗ ಶುದ್ಧವಾಗಿ ಇಟ್ಟುಕೊಳ್ಳಬೇಕು. ಸಕಲರ ಕಲ್ಯಾಣದ ಆಶಯ ಮನದಲ್ಲಿ ತುಂಬಿಕೊಂಡಿರಬೇಕು ಎಂದು ಹೇಳಿದರು.
ಮನುಷ್ಯನ ಜೀವನದಲ್ಲಿ ಬಡತನ- ಸಿರಿತನ ಬಂದು ಹೋಗುತ್ತಿರುತ್ತವೆ. ಮಾನ- ಪ್ರಾಣ ಹೋದ ಮೇಲೆ ಬರಲಾರವು. ಕೀರ್ತಿ- ಅಪಕೀರ್ತಿ ಬಂದ ಮೇಲೆ ಹೋಗಲಾರವು. ಇವೆಲ್ಲವುಗಳನ್ನು ಅರ್ಥೈಸಿಕೊಳ್ಳಬೇಕು. ಲೇಸೆನಿಸಿಕೊಳ್ಳುವ ಬದುಕು ನಮ್ಮದಾಗಿಸಿಕೊಳ್ಳಬೇಕು ಎಂದು ತಿಳಿಸಿದರು.
ದಾಸೋಹಿ ಜಗನ್ನಾಥ ಟೇಲರ್ ಉದ್ಘಾಟಿಸಿದರು. ಪ್ರಮುಖರಾದ ಶಿವಾಜಿ ಮೇತ್ರೆ, ಶ್ರೀಕಾಂತ ಕುಡತೆ, ರಾಜಕುಮಾರ ಬಿರಾದಾರ, ಬಾಬುರಾವ್ ನಾವದಗೇರೆ, ರಘು ಸೂರ್ಯವಂಶಿ, ಶಿವಾಜಿ ಬಿರಾದಾರ ಇದ್ದರು.