ಪವಾಡ ಪುರುಷ ಪಂಚಾಕ್ಷರಿ ಶ್ರೀಗಳು

ದೇವದುರ್ಗ: ಸುಲ್ತಾನಪುರದ ಶ್ರೀಪಂಚಾಕ್ಷರಿ ಶಿವಾಚಾರ್ಯ ಶ್ರೀಗಳು ಪವಾಡ ಪುರುಷರಾಗಿದ್ದು, ಬರಗಾಲದಲ್ಲಿ ತಮ್ಮ ಪವಾಡ ಮೂಲಕ ಮಳೆತರಿಸಿ ರೈತರಿಗೆ ನೆರವಾಗಿದ್ದಾರೆ ಎಂದು ಗಬ್ಬೂರು ಶ್ರೀಬೂದಿಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಗಬ್ಬೂರು ಸಮೀಪದ ಸುಲ್ತಾನಪುರದ ಶ್ರೀಪಂಚಾಕ್ಷರಿ ಶಿವಾಚಾರ್ಯ ಜಾತ್ರಾ ಮಹೋತ್ಸವ, ಧರ್ಮಸಭೆ ಹಾಗೂ ಐದು ಜೋಡಿಗಳ ಸಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಮಳೆ ಬಾರದೆ ಭಕ್ತರು ಸೇರಿ ರೈತರು ತಲೆಮೇಲೆ ಕೈಹೊತ್ತು ಕುಳಿತ ಸಂದರ್ಭದಲ್ಲಿ ಶ್ರೀಪಂಚಾಕ್ಷರಿ ಶಿವಾಚಾರ್ಯ ಶ್ರೀಗಳು ಸಪ್ತ ಭಜನೆ ಕಾರ್ಯಕ್ರಮ ಆಯೋಜಿಸಿ ಮಳೆ ತರಿಸಿದ್ದಾರೆ.
ಶ್ರೀಗಳಿಗೆ ಭಕ್ತರು ಮಳೆಸ್ವಾಮಿ ಎಂತಲೂ ಕರೆಯುತ್ತಾರೆ. ಈ ನೆಲದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮ ಮಾಡಿ, ಸಮಾಜಸೇವೆ ಮಾಡಿದ್ದಾರೆ. ಮನುಷ್ಯನ ಹುಟ್ಟುಸಾವಿನ ಜೀವನ ಪಾಣಿ, ಪಕ್ಷಿಯಂತೆ ಇರದೆ ಸದಾ ನೆನಪಿನಲ್ಲಿ ಉಳಿಯುವ ಪಂಚಾಕ್ಷರಿ ಶ್ರೀಗಳಂತೆ ಇರಬೇಕು ಎಂದು ಹೇಳಿದರು.
ನಂತರ ಐದು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಭಕ್ತರಿಂದ ಶ್ರೀಶಂಭುಸೋಮನಾಥ ಶಿವಾಚಾರ್ಯ ಸ್ವಾಮೀಜಿಗಳ ತುಲಾಭಾರ ಸೇವೆ ಜರುಗಿತು. ಜಂಗಮ ವಟುಗಳಿಗೆ ಉಚಿತ ಅಯ್ಯಾಚಾರ, ದೀಕ್ಷೆ ನೆರವೇರಿತು. ಬಿಚ್ಚಾಲಿಯ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಶ್ರೀಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ಶ್ರೀಕಪಿಲಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಮಹಾಂತಯ್ಯ ಇತರರಿದ್ದರು.