ಪವಾಡಶೆಟ್ಟಿ ಸರ್ಕಾರಿ ಸೇವೆ ಮಾದರಿ : ಎಚ್.ಬಿ.ಪಾಟೀಲ

ಕಲಬುರಗಿ:ಜೂ.20: ರೇವಣಸಿದ್ದಪ್ಪ ಪವಾಡಶೆಟ್ಟಿ ಅವರು ಅಂಚೆ ಇಲಾಖೆಯ ವಿವಿಧ ಹುದ್ದೆಗಳಲ್ಲಿ 44 ವರ್ಷಗಳ ಕಾಲ ಸುಧೀರ್ಘ, ದಕ್ಷ, ಪ್ರಾಮಾಣಿಕತೆ, ಸೇವಾ ಮನೋಭಾವನೆ, ಜನಸಾಮಾನ್ಯರೊಂದಿಗೆ ಬೆರೆತು ಸಲ್ಲಿಸಿದ ಸೇವೆ ಎಲ್ಲ ಸರ್ಕಾರಿ ನೌಕರರಿಗೆ ಮಾದರಿಯಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.

    ಆಳಂದ ತಾಲೂಕಿನ ನರೋಣಾ ಗ್ರಾಮದ ಅಂಚೆ ಕಚೇರಿಯ ಸಹಾಯಕ ಶಾಖಾ ಪೋಸ್ಟ್ ಮಾಸ್ಟರ್ ಹುದ್ದೆಯಿಂದ ಮೇ-31ರಂದು ವಯೋನಿವೃತ್ತಿ ಹೊಂದಿರುವ ರೇವಣಸಿದ್ದಪ್ಪ ಪವಾಡಶೆಟ್ಟಿ ಅವರಿಗೆ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಸೋಮವಾರ ಸಂಜೆ ನಗರದಲ್ಲಿ ಜರುಗಿದ ವಯೋನಿವೃತ್ತಿ ಸತ್ಕಾರ ಕಾರ್ಯಕ್ರಮದಲ್ಲಿ ದಂಪತಿ ಸಮೇತ ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
 ರಸ್ತೆ, ಸಾರಿಗೆ ಸೌಲಭ್ಯಗಳಿರದ ಆಗಿನ ಸಂದರ್ಭದಲ್ಲಿ ಟೊಂಕಿನಮಟ್ಟ ನೀರಿನಲ್ಲಿಯೇ ನಡೆದು ನರೋಣಾ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಪತ್ರಗಳು, ಟೆಲಿಗ್ರಾಮ್, ವಿಧವಾ ಪಿಂಚಣಿ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ಕೆಲವು ಸಲ ಮರುದಿನ ಬೆಳೆಗ್ಗೆಯೇ ಸಂದರ್ಶನ, ಲಿಖಿತ ಪರೀಕ್ಷೆ ಇರುತ್ತಿತ್ತು. ಅಂತಹ ಪತ್ರಗಳನ್ನು ಅತಿ ತುರ್ತಾಗಿ ರಾತ್ರಿಯಾದರು ಕೂಡಾ ತೆರಳಿ ಸಂಬಂಧಿತ ವ್ಯಕ್ತಿಗೆ ತಲುಪಿಸಿ, ಅನೇಕ ಜನರಿಗೆ ಅನಕೂಲ ಮಾಡಿಕೊಟ್ಟಿದ್ದಾರೆ. ಪಸ್ತುತವಾಗಿ ವಿವಿಧ ಹುದ್ದೆಗಳಲ್ಲಿರುವ ನೌಕರದಾರರು ಪವಾಡಶೆಟ್ಟಿ ಅವರ ಪ್ರಾಮಾಣಿಕ ಸೇವೆಯಿಂದ ನಾವು ನೌಕರಿ ಪಡೆಯಲು ಸಾಧ್ಯವಾಗಿದ್ದು, ಅವರ ಕೊಡುಗೆ ನಾವೆಂದಿಗೂ ಮರೆಯುವಂತಿಲ್ಲ ಎನ್ನುತ್ತಾರೆ ಎಂಬುದು ಪವಾಡಶೆಟ್ಟಿ ಅವರ ಸೇವೆಗ ಹಿಡಿದ ಕನ್ನಡಿಯಾಗಿದೆ ಎಂದರು.
   ನರೋಣಾ ಗ್ರಾಮದ ಸಮಾಜ ಸೇವಕ ವೀರೇಶ ಬೋಳಶೆಟ್ಟಿ ಮಾತನಾಡಿ, ಪವಾಡಶೆಟ್ಟಿ ಅಂತಹ ಅತ್ಯಂತ ಪ್ರಾಮಾಣಿಕ ಸರ್ಕಾರಿ ನೌಕರ ಮುಂದಿನ ದಿನಗಳಲ್ಲಿ ದೊರೆಯುವುದು ಅಪರೂಪವಾಗಿದೆ. ಅವರ ಸೇವೆ ಎನೆಂಬುದು ನರೋಣಾ ಪೋಸ್ಟ್ ವ್ಯಾಪ್ತಿಯ ಜನಸಾಮಾನ್ಯರೆಲ್ಲರು ಮನದಾಳದ ಮಾತಿಗಳೇ ಸಾಕ್ಷಿಯಾಗಿವೆ ಎಂದರು.
  ಸತ್ಕಾರ ಸ್ವೀಕರಿಸಿ ಮಾತನಾಡಿದ ನಿವೃತ್ತ ಸಹಾಯಕ ಶಾಖಾ ಪೋಸ್ಟ್ ಮಾಸ್ಟರ್ ರೇವಣಸಿದ್ದಪ್ಪ ಪವಾಡಶೆಟ್ಟಿ, ನೌಕರರಲ್ಲಿ ವೇತನಕ್ಕಾಗಿ ನೌಕರಿ ಮಾಡಬೇಕೆಂಬ ಮನೋಭಾವ ಇರಬಾರದು. ಬದ್ದತೆಯಿಂದ ಸೇವೆ ಮಾಡಬೇಕು, ಹುದ್ದೆಯಿಂದ ಜನಸಾಮಾನ್ಯರಿಗೆ ಎಂದಿಗೂ ಕೂಡಾ ತೊಂದರೆಯಾಗದಂತೆ ಸೇವೆ ಸಲ್ಲಿಸಬೇಕು. ಅಂಚೆ ಇಲಾಖೆಯು ಜನತೆಗೆ ಉತ್ತಮವಾದ ಸೇವೆಯನ್ನು ನೀಡುತ್ತಾ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಸ್ತುತವಾಗಿ ಅದು ಕೇವಲ ಪತ್ರ ವಿಲೆವಾರಿಗೆ ಮಾತ್ರ ಸೀಮಿತವಾಗದೆ, ಬ್ಯಾಂಕಿಂಗ್ ಸೇವೆ, ಶುಲ್ಕ, ಚಾಲನ್ ಸ್ವೀಕಾರ, ನಿವೃತ್ತಿ ವೇತನ, ಪೋಸ್ಟಲ್ ಸೇವೆಗಳು, ಪಿಂಚಣಿ ಯೋಜನೆ, ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಸೇವೆ ಮಾಡುತ್ತಿದ್ದು, ತನ್ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಅಂಚೆ ಇಲಾಖೆಯು ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲರು ಇಲಾಖೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಜಗದೇವಿ ಶಿವಯೋಗಪ್ಪ ಬಿರಾದಾರ, ಸ್ವಾತಿ ಆರ್.ಪವಾಡಶೆಟ್ಟಿ, ಲಿಂಗರಾಜ ವಾಲಿ, ಶಬ್ಬೀರ್ ಅಲಿ, ಬಸವರಾಜ ರೋಳೆ, ಸುಭಾಷ ಗುತ್ತೇದಾರ, ಶ್ರೀಕಾಂತ ಕೊಳ್ಳಿ, ಮಲ್ಲಿಕಾರ್ಜುನ ಅನೂರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.