
ಶಿವಮೊಗ್ಗ, ಮಾ.14:ಸದಾ ಕಾಲ ಕರೆಂಟ್ ಕಟ್, ಲೈನ್ ಪ್ರಾಬ್ಲಂ, ವಿದ್ಯುತ್ ಬಿಲ್ ವಸೂಲಾತಿ ಸೇರಿದಂತೆ ದಿನವೀಡಿ ದುಡಿಯುವ ಶ್ರಮ ಜೀವಿಗಳ ತಂಡವಾದ ಶಿವಮೊಗ್ಗ ಮೆಸ್ಕಾಂ ಉದ್ಯೋಗಿಗಳ ಹಾಗೂ ಅಧಿಕಾರಿಗಳು ಎರಡು ದಿನಗಳ ಕಾಲ ಒಂದೆಡೆ ಸೇರಿ ಅರ್ಥಪೂರ್ಣವಾದ ಕಾರ್ಯಕ್ರಮದೊಂದಿಗೆ ಕ್ರಿಕೆಟ್ ಪಂದ್ಯದಲ್ಲಿ ಮುಳುಗಿದ್ದು ವಿಶೇಷ.ಶಿವಮೊಗ್ಗ ಹೆಚ್.ಬಿ.ಈರಪ್ಪ ಗ್ರಾಮೀಣಾಭಿವೃದ್ಧಿ ಮತ್ತು ಎಜುಕೇಷನ್ ಟ್ರಸ್ಟ್, ತುಂಗಾ ತರಂಗ ದಿನಪತ್ರಿಕೆ ಆಶ್ರಯದಲ್ಲಿ ಆಕಸ್ಮಿಕ ಅವಘಡಗಳಿಂದ ನಿಧನ ಹೊಂದಿದ ಪವರ್ ಮ್ಯಾನ್‌ಗಳ ಸ್ಮಾರಣಾರ್ಥ ಜೆಎನ್‌ಎನ್‌ಸಿಸಿ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪವರ್ ಕಪ್ ಕ್ರಿಕೆಟ್ ಪಂದ್ಯಾವಳಿ ಅತ್ಯಂತ ವ್ಯವಸ್ಥಿತವಾಗಿ ನಡೆಯಿತು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ನಿಧನ ಹೊಂದಿದ ೯ ಪವರ್ ಮ್ಯಾನ್ ಹಾಗೂ ಗುತ್ತಿಗೆ ಉದ್ಯೋಗಿಗಳ ಕುಟುಂಬದವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.ಶಿವಮೊಗ್ಗ ಜಿಲ್ಲೆಯ ೧೮ ವಲಯಗಳ ತಂಡಗಳು ಈ ೨ದಿನಗಳ ಕಾಲ ರೋಚಕ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಅಂತಿಮವಾಗಿ ತೀರ್ಥಹಳ್ಳಿ ಸರ್ಕಿಟ್ ಬ್ರೇಕರ‍್ಸ್ ತಂಡ ಪ್ರಥಮ ಬಹುಮಾನವಾಗಿ ೧೫ ಸಾವಿರ ನಗದು ಹಾಗೂ ಟ್ರೋಫಿಯನ್ನು ಬಾಚಿಕೊಂಡಿತು. ಅಂತೆಯೇ ರಿಯಲ್ ಫೈಟರ್ ಹೊಸನಗರ ತಂಡ ದ್ವಿತೀಯ ಬಹುಮಾನವಾಗಿ ೧೦ ಸಾವಿರ ನಗದು ಹಾಗೂ ಟ್ರೋಫಿಯನ್ನು ಗೆದ್ದುಕೊಂಡಿತ್ತು.