ಪಲ್ಲವಿ ಟಾಕೀಸ್ನಲ್ಲಿ ತಿಲಕ್

ಕೆಲ ವರ್ಷದ ಹಿಂದೆ “6 ನೇ ಮೈಲಿ” ಚಿತ್ರ ನಿರ್ದೇಶಿಸಿ ಗಮನಸೆಳೆದಿದ್ದ ಶ್ರೀನಿವಾಸ್ ಚಿಕ್ಕಣ್ಣ – ಸೀನಿ ಇದೀಗ ಪಲ್ಲವಿ ಟಾಕೀಸ್ ಬಳಿ ಬಂದು ನಿಂತಿದ್ದಾರೆ. ಜೊತೆಗೆ ನಟ ತಿಲಕ್ ಅವರನ್ನು ಟಾಕೀಸ್ ಬಳಿ ಕರೆತಂದಿದ್ದಾರೆ.

ಅರೆ ಲಾಕ್ ಡೌನ್ ನಿಂದಾಗಿ ಚಿತ್ರಮಂದಿರ ಬಂದ್ ಮಾಡಿರುವ ಸಮಯದಲ್ಲಿ ಚಿತ್ರಮಂದಿರದ ಮುಂದೆ ಬಂದು ಏನು ಮಾಡುತ್ತಿದ್ದಾರೆ ಎನ್ನುವ ಕುತೂಹಲ‌ ಸಹಜ. ಇಂತಹ ಕುತೂಲಕ್ಕೆ ಸೀನಿ ಉತ್ತರ ನೀಡಿದ್ದಾರೆ. ಅವರ ಹೊಸ ಚಿತ್ರದ ಹೆಸರು “H/34 ಪಲ್ಲವಿ ಟಾಕೀಸ್”.ಹೀಗಾಗಿ ಟಾಕೀಸ್ ಮುಂದೆ ಬಂದಿದ್ದಾರೆ.

ಹಾರಾರ್ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಆಧಾರಿತ ಚಿತ್ರ ಇದಾಗಿದೆ. ಚಿತ್ರವನ್ನು ಸದ್ದಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆ ಹಂತಕ್ಕೆ ತಂದಿದ್ದಾರೆ. ಚಿತ್ರದ “ಬರೆವೆ ಬರೆವೆ ಒಲವ ಕವನ” ಎಂಬ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದ್ದು ಸದ್ದು ಮಾಡುತ್ತಿದೆ.

ನಿರ್ದೇಶಕ ಶ್ರೀನಿವಾಸ್ ಚಿಕ್ಕಣ್ಣ-ಸೀನಿ ಬರೆದಿರುವ ಹಾಡನ್ನು ಬಾಲಿವುಡ್‌ ನ ಜನಪ್ರಿಯ ಗಾಯಕ ಅಂಕಿತ್ ತಿವಾರಿ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸದ್ಯದಲ್ಲೇ ಚಿತ್ರದ ಟ್ರೇಲರ್ ಬಿಡುಗಡೆಗಲಿದೆ. ಜೂನ್ ಎರಡನೇ ವಾರದಲ್ಲಿ ಓ ಟಿ ಟಿ ಫ್ಲಾಟ್ ಫಾರಂ ಮೂಲಕ ಚಿತ್ರ ಬಿಡುಗಡೆಯಾಗುವ ಎಲ್ಲಾ ಸಾಧ್ಯತೆಗಳಿವೆ .

ಮಂಜುನಾಥ್ ಕೆ ಹಾಗೂ ರವಿಕಿರಣ್ ಎಂ ಗೌಡ ಚಿತ್ರ ‌ನಿರ್ಮಿಸಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಅಕ್ಷಯ್ ಪಿ ರಾವ್ ಸಂಕಲನ ಚಿತ್ರಕ್ಕಿದೆ. ತಿಲಕ್, ಯಜ್ಞಾ ಶೆಟ್ಟಿ ,ಸಚೇಂದ್ರ ಪ್ರಸಾದ್, ಅವಿನಾಶ್, ಸುಧಾ ಬೆಳವಾಡಿ, ಅಚ್ಯುತಕುಮಾರ್, ಪದ್ಮಜಾರಾವ್, ಕುರಿ ಪ್ರತಾಪ್, ವಿಶ್ವ, ಅಮೃತ ಮಯೂರಿ, ರಾಜೇಶ್ವರಿ, ರಾಕ್ ಲೈನ್ ಸುಧಾಕರ್, ಅಜಯ್ ರಾಜ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.