ಪಲಿಮಾರು ಶ್ರೀಗಳಿಗೆ ಗೌರವ ಡಾಕ್ಟರೇಟ್ ಪದವಿ

ಮಂಗಳೂರು, ಅ.೨೭- ಶ್ರೀನಿವಾಸ್ ವಿಶ್ವವಿದ್ಯಾಲಯವು ಉಡುಪಿಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿಯವರಿಗೆ ವೇದಿಕ್ ಸೈನ್ಸ್ ಮತ್ತು ದ್ವೈತ ವೇದಾಂತದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ವಿಶ್ವವಿದ್ಯಾಲಯದ ಸಿಟಿ ಕ್ಯಾಂಪಸ್‌ನಲ್ಲಿ ಆಯೋಜಿಸಿದ ೨ನೇ ವಾರ್ಷಿಕ ಘಟಿಕೋತ್ಸವದಲ್ಲಿ ನೀಡಿ ಸನ್ಮಾನಿಸಲಾಯಿತು.
ಪದವಿಯನ್ನು ಸ್ವೀಕರಿಸಿ ಮಾತನಾ ಡಿದ ಶ್ರೀಗಳು, ಶ್ರೀನಿವಾಸ ಎಂಬ ಹೆಸರಿಗೂ ನನಗೂ ಅವಿನಾಭಾವ ಸಂಬಂಧವಿದೆ. ನಾನು ಚಿಕ್ಕವನಿದ್ದಾಗ ನನ್ನ ಅಮ್ಮ ಶ್ರೀನಿವಾಸನಿಗೆ ಹರಕೆಯನ್ನು ಹೊತ್ತಿದ್ದರು. ಅದರಂತೆ ನನಗೆ ಉಪನಯನವನ್ನೂ ಅಲ್ಲೇ ಮಾಡಿಸಿದರು. ಇದೀಗ ಶ್ರೀನಿವಾಸ್ ವಿಶ್ವವಿದ್ಯಾಲಯ ದಿಂದ ಗೌರವ ಡಾಕ್ಟರೇಟ್ ಪದವಿ ಪಡೆಯುತ್ತಿರುವುದು ವಿಶೇಷ ಹಾಗೂ ಸಂತಸದ ವಿಚಾರ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಎ. ರಾಘವೇಂದ್ರ ರಾವ್ ಮಾತನಾಡಿ, ಭಕ್ತರಿಗೆ ನಗುಮುಖದಿಂದ ಜನರಿಗೆ ಸೇವೆಯನ್ನು ನೀಡುತ್ತಾ ಬರುವ ಸ್ವಾಮೀಜಿಗಳು ಶ್ರೀನಿವಾಸ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿರುವುದು ನಮಗೆ ಹೆಮ್ಮೆಯ ವಿಚಾರ ಎಂದರು.
ಶ್ರೀನಿವಾಸ್ ವಿಶ್ವ ವಿದ್ಯಾಲಯದ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್, ಕುಲಪತಿ ಡಾ. ಪಿ. ಎಸ್. ಐತಾಳ್, ಆಡಳಿತ ಮಂಡಳಿಯ ಟ್ರಸ್ಟಿನ ಸದಸ್ಯರಾದ ವಿಜಯಲಕ್ಷ್ಮೀ ಆರ್. ರಾವ್, ಪ್ರೊ. ಎ. ಮಿತ್ರಾ ಎಸ್. ರಾವ್, ಕುಲಸಚಿವರಾದ ಡಾ. ಅನಿಲ್ ಕುಮಾರ್, ಡಾ. ಶ್ರೀನಿವಾಸ್ ಮಯ್ಯ, ಡಾ. ಅಜಯ್ ಕುಮಾರ್, ಆದಿತ್ಯ ಕುಮಾರ್ ಮತ್ತಿತರರಿದ್ದರು.