ಪರ್ವತಾರೋಹಣಕ್ಕೆ ತೆರಳಿ ಮೃತರ ಸಂಖ್ಯೆ ೯ಕ್ಕೆ ಏರಿಕೆ

ಡೆಹ್ರಾಡೂನ್ (ಉತ್ತರಾಖಂಡ),ಜೂ.೬- ಇಉತ್ತರಕಾಶಿ-ತೆಹ್ರಿ ಜಿಲ್ಲೆಯ ಗಡಿಯಲ್ಲಿರುವ ಸಹಸ್ತ್ರತಾಲ್ ಪರ್ವತಾರೋಹಣಕ್ಕೆ ತೆರಳಿದ್ದವರ ಸಂಖ್ಯೆ ೯ಕ್ಕೆ ಏರಿಕೆಯಾಗಿದೆ. ನಿನ್ನೆ ಐವರ ಮೃತದೇಹಗಳು ಪತ್ತೆಯಾಗಿದ್ದು, ಇಂದು ನಾಲ್ವರ ಮೃತದೇಹಗಳು ಸಿಕ್ಕಿದ್ದು, ಮೃತರೆಲ್ಲರೂ ಬೆಂಗಳೂರಿನ ನಿವಾಸಿಗಳಾಗಿದ್ದಾರೆ.
ಪತ್ತೆಯಾದ ನಾಲ್ವರ ಶವಗಳನ್ನು ರಕ್ಷಣಾ ಪಡೆಯು ಭಟ್ವಾಡಿಗೆ ರವಾನಿಸಿದೆ. ಕರ್ನಾಟಕದ ೧೯, ಮಹಾರಾಷ್ಟ್ರ ಇಬ್ಬರು ಮತ್ತು ಓರ್ವ ಸ್ಥಳೀಯ ಮಾರ್ಗದರ್ಶಕರು ಸೇರಿ ಒಟ್ಟು ೨೨ ಜನರ ತಂಡ ಪರ್ವತಾರೋಹಣಕ್ಕೆ ತೆರಳಿತ್ತು. ಈ ವೇಳೆ ಹವಾಮಾನ ವೈಪರೀತ್ಯ ಉಂಟಾಗಿ ಅಪಾಯಕ್ಕೆ ಸಿಲುಕಿದ್ದರು. ಇದರಲ್ಲಿ ಕರ್ನಾಟಕದ ೯ ಚಾರಣಿಗರು ಮೃತಪಟ್ಟಿದ್ದಾರೆ.
೨೨ ಸದಸ್ಯರ ಟ್ರೆಕ್ಕಿಂಗ್ ತಂಡವು ಮೇ ೨೯ರಂದು ಮನೇರಿಯ ಹಿಮಾಲಯನ್ ವ್ಯೂ ಟ್ರೆಕ್ಕಿಂಗ್ ಏಜೆನ್ಸಿ ಮುಖಾಂತರವಾಗಿ ಮಲ್ಲ-ಸಿಲ್ಲಾ-ಕುಷ್ಕಲ್ಯಾಣ-ಸಹಸ್ತ್ರತಾಲ್‌ಗೆ ಟ್ರೆಕ್ಕಿಂಗ್‌ಗೆ ತೆರಳಿತ್ತು. ಈ ತಂಡವು ಜೂನ್ ೭ರೊಳಗೆ ಹಿಂತಿರುಗಬೇಕಿತ್ತು. ಟ್ರೆಕ್ಕಿಂಗ್ ತಂಡ ಮಂಗಳವಾರ ಸಹಸ್ತ್ರತಾಲ್‌ಗೆ ಹಿಂತಿರುಗಿದ್ದ ವೇಳೆ ಹಠಾತ್ ಹವಾಮಾನ ಬದಲಾವಣೆ ಆಗಿದೆ. ದಟ್ಟವಾದ ಮಂಜು ಮತ್ತು ಹಿಮಪಾತದ ನಡುವೆ ಸಿಲುಕಿಕೊಂಡಿದ್ದಾರೆ. ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಚಾರಣಿಗರು ಇಡೀ ರಾತ್ರಿ ಚಳಿಯಲ್ಲಿ ಸಿಲುಕಿಕೊಂಡಿದ್ದರು.
ಘಟನೆಯ ಬಗ್ಗೆ ಮಾಹಿತಿ ಪಡೆದ ಎಸ್‌ಡಿಆರ್‌ಎಫ್ ತಂಡ ೨ ಗುಂಪುಗಳನ್ನು ರಚಿಸಿಕೊಂಡು ಕಾರ್ಯಾಚರಣೆ ನಡೆಸಿದೆ. ಮೂವರು ಸದಸ್ಯರ ತಂಡವನ್ನು ಡೆಹ್ರಾಡೂನ್‌ನ ಸಹಸ್ತ್ರಧಾರಾ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಮೂಲಕ ರಕ್ಷಣೆಗಾಗಿ ಕಳುಹಿಸಿತ್ತು. ಈ ತಂಡವು ೧೩ ಜನರನ್ನು ರಕ್ಷಣೆ ಮಾಡಿ ಡೆಹರಾಡೂನ್‌ನ ಆಸ್ಪತ್ರೆಗೆ ಸಾಗಿಸಿದೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದಿಂದ ಇದ್ದಾರೆ ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.
ಸಿಎಂ ಧಾಮಿ ಸಂತಾಪ: ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಸಂತಾಪ ಸೂಚಿಸಿದ್ದಾರೆ. “ಚಾರಣದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ೯ ಚಾರಣಿಗರು ಸಾವನ್ನಪ್ಪಿದ ಸುದ್ದಿ ತುಂಬಾ ದುಃಖಕರವಾಗಿದೆ. ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿ ೧೩ ಚಾರಣಿಗರನ್ನು ರಕ್ಷಿಸಲಾಗಿದೆ. ಅಗಲಿದ ಆತ್ಮಗಳಿಗೆ ಶಾಂತಿ ಮತ್ತು ದುಃಖದಲ್ಲಿರುವ ಕುಟುಂಬಗಳಿಗೆ ಈ ಅಪಾರ ನಷ್ಟವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ” ಎಂದು ಸಿಎಂ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ