ಪರ್ಯಾಯ ಸಂಸ್ಕøತಿ ನಿರ್ಮಾಣ ಶರಣರ ಮುಖ್ಯ ಗುರಿ: ಆರ್.ಕೆ. ಹುಡಗಿ

ಕಲಬುರಗಿ:ಜೂ.20: ಶರಣರ ಆಂದೋಲನ ಜಗತ್ತಿನ ಚರಿತ್ರೆಯಲ್ಲಿ ಬಹಳ ವಿಶಿಷ್ಟವಾಗಿದೆ. ಈ ಆಂದೋಲನ ಅದ್ವಿತೀಯವಾದುದಾಗಿದೆ ಎಂದು ಪ್ರಗತಿಪರ ಚಿಂತಕ ಪೆÇ್ರ. ಆರ್.ಕೆ. ಹುಡಗಿ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾ, ಬಸವಪರ ಸಂಘಟನೆಗಳ ಒಕ್ಕೂಟ, ಬಸವ ಜಯಂತಿ ಉತ್ಸವ ಸಮಿತಿ ಆಶ್ರಯದಲ್ಲಿ ನಗರದ ಬಸವ ಮಂಟಪದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಾದಿ ಶರಣರ ಉದ್ದೇಶ ಕೇವಲ ಧರ್ಮ ಸ್ಥಾಪನೆ ಆಗಿರಲಿಲ್ಲ. ಪರ್ಯಾಯ ಸಂಸ್ಕøತಿ ನಿರ್ಮಾಣ ಮಾಡುವುದು ಅವರ ಮುಖ್ಯ ಗುರಿಯಾಗಿತ್ತು. ಶಿಕ್ಷಣ ಸಂವಹನಕ್ಕೆ ವಚನ ಮಾಧ್ಯಮವನ್ನು ಅವರು ಬಳಸಿದರು. ಶರಣರ ಒಂದೊಂದು ವಚನಗಳು ಅಂಕಣ ಬರಹದ ವ್ಯಾಪ್ತಿ ಹೊಂದಿವೆ. ತಮ್ಮ ವೃತ್ತಿಯ ಆನುಭಾವಿಕ ನೆಲೆಯ ಪರಿಭಾಷೆಯಲ್ಲಿ ವಚನಗಳನ್ನು ಬರೆದರು. ಹೀಗಾಗಿ ವಚನಗಳೇ ಮಾಧ್ಯಮಗಳು ಎಂದು ಅಭಿಪ್ರಾಯಪಟ್ಟರು.

ಸಾನ್ನಿಧ್ಯ ವಹಿಸಿದ್ದ ಧುತ್ತರಗಾಂವ- ಉಸ್ತುರಿ ಮಠದ ಕೋರಣೇಶ್ವರ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ವಚನ ಮಾಧ್ಯಮವನ್ನು ಬಳಸುವ ಮೂಲಕ ಮಾನವೀಯತೆ ಮೆರೆದರು. ಇವನಾರವ ಎನ್ನದೆ ಇವ ನಮ್ಮವ ಎನ್ನುವ ತಾತ್ವಿಕ ಸಿದ್ಧಾಂತವನ್ನು ಶರಣರು ಪ್ರತಿಪಾದಿಸಿದರು ಎಂದು ಹೇಳಿದರು.

ಇದೇ ವೇಳೆಯಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿವಿಧ ದತ್ತಿ ಪ್ರಶಸ್ತಿ ಪಡೆದ ಹಾಗೂ ಐಎಫ್ ಡಬ್ಲೂಜೆ ಸದಸ್ಯರಾಗಿ ನೇಮಕಗೊಂಡ ಬಾಬುರಾವ ಯಡ್ರಾಮಿ, ದೇವಯ್ಯ ಗುತ್ತೇದಾರ, ಶರಣಯ್ಯ ಸ್ವಾಮಿ ಹಿರೇಮಠ, ಶಿವರಾಯ ದೊಡ್ಡಮನಿ, ರಾಜಕುಮಾರ ಉದನೂರ, ಮಂಜುನಾಥ ಜೂಟಿ, ಹಣಮಂತರಾವ ಭೈರಾಮಡಗಿ, ದೇವೇಂದ್ರಪ್ಪ ಅವಂಟಿ, ಜಯತೀರ್ಥ ಪಾಟೀಲ, ನಜೀರ್ ಮಿಯಾ ಹಟ್ಟಿ ಹಾಗೂ ಬಸವ ಜಯಂತಿ ಉತ್ಸವದ ದಾಸೋಹಿಗಳಿಗೆ ಸನ್ಮಾನ ಮಾಡಲಾಯಿತು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿದ್ದ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಶಾಬಾದಿ, ಸಮಿತಿ ಗೌರವಾಧ್ಯಕ್ಷ ಉಮಾಕಾಂತ ನಿಗ್ಗುಡಗಿ, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ನಳಿನಿ ಮಹಾಗಾಂವಕರ ಮಾತನಾಡಿ, ಜಾಗತಿಕ ಲಿಂಗಾಯತ ಮಹಾಸಭಾ ಬಸವಾದಿ ಶರಣರ ವಿಚಾರಧಾರೆಯ ತಳಹದಿಯ ಮೇಲೆ ಮುನ್ನಡೆಯುತ್ತಿದ್ದು, ಈ ಬಾರಿ ಅರ್ಥಪೂರ್ಣ ಜಯಂತಿ ಆಚರಿಸುವ ಮೂಲಕ ಜನರಲ್ಲಿ ಪ್ರಜ್ಞೆ ತುಂಬುವ ಕೆಲಸ ಮಾಡಲಾಯಿತು ಎಂದರು.

ಶಿವಕುಮಾರ ಬಿದರಿ ನಿರೂಪಿಸಿದರು. ಆರ್.ಜಿ. ಶೆಟಗಾರ ಸ್ವಾಗತಿಸಿದರು. ನಾಗೇಂದ್ರಪ್ಪ ಮಾಡ್ಯಾಳ, ಹಣಮಂತ ಗುಡ್ಡಾ ಪ್ರಾರ್ಥಿಸಿದರು. ಬಸವರಾಜ ಧೂಳಾಗುಂಡಿ ವಂದಿಸಿದರು.

ಶ್ರೀಕಾಂತ ಚೋಕಾ, ಮಲ್ಲಮ್ಮ ಸಿದ್ರಾಮಪ್ಪ ಬಾಲಪಗೋಳ್, ಮಾಲತಿ ರೇಶ್ಮಿ, ಮಾಲಾಕಣ್ಣಿ, ಬಸವರಾಜ ರುಕ್ಮಾಪುರ, ಹಣಮಂತರಾಯ ಕುಸನೂರ, ಶಿವಶರಣಪ್ಪ ದೇಗಾಂವ, ಅಯ್ಯನಗೌಡ ಪಾಟೀಲ, ಸಂಗಮೇಶ ಗುಬ್ಬೆವಾಡ ಮತ್ತಿತರರಿದ್ದರು.

ವಿಶಿಷ್ಠ ಪರಿಕಲ್ಪನೆಯ ಶರಣರು

ಶರಣರ ವಚನಗಳಲ್ಲಿ ಮಾಧ್ಯಮದ ಪರಿಕಲ್ಪನೆ ವಿಷಯ ಕುರಿತು ಪತ್ರಕರ್ತ-ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಮಾತನಾಡಿ, ವಚನ ಚಳವಳಿ ಜನರ ಮನ ಮನೆ ತಲುಪಲು ಪ್ರಸರಣಕ್ಕಾಗಿ ಶರಣರು ವಚನ ಮಾಧ್ಯಮ ಬಳಸಿದರು. ಅನುಭವ ಮಂಟಪದಲ್ಲಿ ಹುರಿಗೊಂಡ ವಿಚಾರ, ಕಾಯಕ, ದಾಸೋಹ, ಜಾತಿ ನಿರ್ಮೂಲನೆ, ಸಮಾನತೆಯ ಆಲೋಚನೆಗಳನ್ನು ತಿಳಿಸಲು ಕಾಯಕವೇ ಕೈಲಾಸ, ಕಳಬೇಡ, ಕೊಲಬೇಡ ಎಂಬತಹ ಸ್ಟೇಟ್ ಮೆಂಟ್ ಗಳನ್ನು ನೀಡಿದರು. ಎಲೆಕ್ಟ್ರಾನಿಕ್, ವಿಸ್ಯೂವಲ್, ಪ್ರಿಂಟ್ ಮೀಡಿಯಾ ಇಲ್ಲದ 12ನೇ ಶತಮಾನದಲ್ಲಿ ಶರಣರು ಬಳಸಿದ್ದು ಜನಪದರ ಮೌಖಿಕ ಪರಂಪರೆ. ಶರಣರ ವಚನಗಳು ಮೌನದಿಂದ ಬಂದವುಗಳಲ್ಲ. ಅವು ಜಾಗೃತ ಮತ್ತು ಎಚ್ಚರದ ಮನಸ್ಸಿನಿಂದ ಮೂಡಿದವುಗಳಾಗಿವೆ ಎಂದು ಅವರು ವಿವರಿಸಿದರು.