ಪರ್ಯಾಯ ‘ಕಲ್ಯಾಣ ಪರ್ವ’ಕ್ಕೆ ಅವಕಾಶ ಬೇಡ

ಬೀದರ್:ಸೆ.17: ಬಸವಕಲ್ಯಾಣದ ಬಸವ ಮಹಾಮನೆ ಆವರಣದಲ್ಲಿ ಅಕ್ಟೋಬರ್ 1 ಮತ್ತು 2 ರಂದು ಚೆನ್ನಬಸವಾನಂದ ಸ್ವಾಮೀಜಿ ಹಾಗೂ ಅವರ ಹಿಂಬಾಲಕರಿಗೆ ಪರ್ಯಾಯ ಕಲ್ಯಾಣ ಪರ್ವ ನಡೆಸಲು ಅವಕಾಶ ಕೊಡಬಾರದು ಎಂದು ಬಸವ ಪರ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾ ಆಡಳಿತವನ್ನು ಆಗ್ರಹಿಸಿದ್ದಾರೆ.
ನಗರದಲ್ಲಿ ನಿಯೋಗದಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಬಸವ ಧರ್ಮ ಪೀಠಾಧ್ಯಕ್ಷರ ನೇತೃತ್ವದಲ್ಲಿ 20 ವರ್ಷಗಳಿಂದ ಬಸವಕಲ್ಯಾಣದಲ್ಲಿ ಮೂರು ದಿನಗಳ ಕಲ್ಯಾಣ ಪರ್ವ ಸಂಘಟಿಸುತ್ತ ಬರಲಾಗಿದೆ. ವಿವಿಧ ರಾಜ್ಯಗಳ ಸಹಸ್ರಾರು ಬಸವ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಪೀಠವು ಈಗಾಗಲೇ ಅಕ್ಟೋಬರ್ 8, 9 ಮತ್ತು 10 ರಂದು ಈ ವರ್ಷದ ಕಲ್ಯಾಣ ಪರ್ವ ನಡೆಸುವುದಾಗಿ ಘೋಷಿಸಿದೆ. ಆದರೆ, ಚೆನ್ನಬಸವಾನಂದ ಸ್ವಾಮೀಜಿ ಅ. 1 ಮತ್ತು 2 ರಂದು ಬಸವ ಮಹಾಮನೆಯಲ್ಲೇ ಪರ್ಯಾಯ ಕಲ್ಯಾಣ ಪರ್ವ ಹಮ್ಮಿಕೊಳ್ಳುವುದಾಗಿ ಹೇಳಿಕೆ ಕೊಟ್ಟು, ಬಸವ ಭಕ್ತರಲ್ಲಿ ಗೊಂದಲ ಸೃಷ್ಟಿಸಿದ್ದಾರೆ ಎಂದು ದೂರಿದರು.
ಬಸವ ಧರ್ಮ ಪೀಠದ ಹಿಂದಿನ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಮಹಾದೇವಿ ಅವರು ಬಸವಣ್ಣನವರ ವಚನಗಳಲ್ಲಿ ಕೂಡಲಸಂಗಮ ದೇವ ವಚನಾಂಕಿತದ ಬದಲು ಲಿಂಗದೇವ ಬಳಸಿ ಬಸವ ವಚನ ದೀಪ್ತಿ ಪುಸ್ತಕ ಪ್ರಕಟಿಸಿದ್ದರು. ಸರ್ಕಾರ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಂಡಾಗ ನ್ಯಾಯಾಲಯದ ಮೊರೆ ಹೋಗಿದ್ದರು. ಸುಪ್ರೀಂಕೋರ್ಟ್ ರಾಜ್ಯ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿತ್ತು. ಬಳಿಕ ಮಾತೆ ಮಹಾದೇವಿ ಅವರು ಸ್ವತಃ ಕೋರ್ಟ್ ತೀರ್ಪಿಗೆ ಬದ್ಧಳಾಗಿರುತ್ತೇನೆ ಎಂದು ಬಹಿರಂಗ ಸಭೆಯಲ್ಲಿ ಘೋಷಿಸಿದ್ದರು ಎಂದು ಹೇಳಿದರು.
ಈ ಕಾರಣ ಹಾಲಿ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಡಾ. ಗಂಗಾದೇವಿ ಅವರು ಇನ್ನು ಮುಂದೆ ಪೀಠವು ಬಸವಣ್ಣನವರ ವಚನಗಳಿಗೆ ಮೂಲ ಅಂಕಿತನಾಮವನ್ನೇ ಬಳಸಲಿದೆ ಎಂದು ಘೋಷಿಸಿದ್ದರು. ಇದನ್ನು ನಾಡಿನ ಸರ್ವರೂ ಸ್ವಾಗತಿಸಿದ್ದರು. ಚೆನ್ನಬಸವಾನಂದ ಸ್ವಾಮೀಜಿ ಮಾತಾಜಿಯವರ ಹೇಳಿಕೆ ವಿರೋಧಿಸಿ, ಲಿಂಗದೇವ ವಚನಾಂಕಿತವನ್ನೇ ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿಕೆ ಕೊಡುತ್ತ, ನ್ಯಾಯಾಂಗ ನಿಂದನೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಬಸವ ಧರ್ಮ ಪೀಠದಿಂದ ಉಚ್ಚಾಟಿಸಲಾಗಿದೆ. ಅದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋದ ಅವರು ಅಲ್ಲಿಯೂ ಮುಖಭಂಗ ಅನುಭವಿಸಿದ್ದಾರೆ ಎಂದು ತಿಳಿಸಿದರು.
ಇದೀಗ ಬಸವ ಮಹಾಮನೆಯಲ್ಲಿ ಅಕ್ರಮವಾಗಿ ಪ್ರವೇಶಿಸಿ, ಪರ್ಯಾಯ ಕಲ್ಯಾಣ ಪರ್ವದ ದಿನಾಂಕ ಘೋಷಿಸಿ ಬಸವ ಭಕ್ತರಲ್ಲಿ ಗೊಂದಲ ಹುಟ್ಟು ಹಾಕಿದ್ದಾರೆ. ಕಾರ್ಯಕ್ರಮಕ್ಕೆ ದೇಣಿಗೆಯನ್ನೂ ಸಂಗ್ರಹಿಸುತ್ತಿದ್ದಾರೆ ಎಂದು ಆಪಾದಿಸಿದರು.
ಯಾವುದೇ ಕಾರಣಕ್ಕೂ ಪರ್ಯಾಯ ಕಲ್ಯಾಣ ಪರ್ವಕ್ಕೆ ಅವಕಾಶ ಕೊಡುವುದಿಲ್ಲ. ಜಿಲ್ಲಾ ಆಡಳಿತ ಪರ್ಯಾಯ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು. ಬಸವ ಮಹಾಮನೆಯಲ್ಲಿ ಚೆನ್ನಬಸವಾನಂದ ಸ್ವಾಮೀಜಿ ಮತ್ತು ಅವರ ಹಿಂಬಾಲಕರ ಅಕ್ರಮ ಪ್ರವೇಶ ತಡೆಯಬೇಕು. ಈಗಾಗಲೇ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಡಾ. ಗಂಗಾದೇವಿ ಅವರ ನೇತೃತ್ವದ ಸಭೆಯಲ್ಲಿ ಘೋಷಣೆ ಮಾಡಲಾದ ಅಕ್ಟೋಬರ್ 8, 9 ಮತ್ತು 10 ರಂದೇ ಕಲ್ಯಾಣ ಪರ್ವ ಸುಗಮವಾಗಿ ನಡೆಸಲು ಅನುವು ಮಾಡಿಕೊಡಬೇಕು ಒತ್ತಾಯಿಸಿದರು.
ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಗಂದಗೆ, ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಭಾರತೀಯ ಬಸವ ಬಳಗದ ಜಿಲ್ಲಾ ಘಟಕದ ಅಧ್ಯಕ್ಷ ಬಾಬುವಾಲಿ, ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ, ರಾಷ್ಟ್ರೀಯ ಬಸವ ದಳದ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಸಂಜುಕುಮಾರ ಪಾಟೀಲ, ಬಸವ ಸೇವಾ ಪ್ರತಿಷ್ಠಾನದ ಆಡಳಿತಾಧಿಕಾರಿ ಶಂಕರೆಪ್ಪ ಹೊನ್ನಾ, ಲಿಂಗಾಯತ ಬ್ರಿಗೇಡ್ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ, ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಿಠಾರೆ ನಿಯೋಗದಲ್ಲಿ ಇದ್ದರು.