ಪರ್ಕಳ ರಸ್ತೆ ಕಾಮಗಾರಿ ಮೇ ತಿಂಗಳೊಳಗೆ ಪೂರ್ಣ: ಭಟ್‌

ಉಡುಪಿ, ನ.೧೪- ಮೇ ತಿಂಗಳೊಳಗೆ ಪರ್ಕಳ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಶಾಸಕ ರಘುಪತಿ ಭಟ್‌ರವರು ಭರವಸೆ ನೀಡಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ ಅವರ ಪ್ರಯತ್ನದಿಂದ, ಕಡಿಯಾಳಿ ಮತ್ತು ಪರ್ಕಳ ನಡುವಿನ ರಸ್ತೆಯನ್ನು ನಾಲ್ಕು ಪಥದ ರಸ್ತೆಯಾಗಿ ಅಭಿವೃದ್ಧಿಪಡಿಸಲು 99.86 ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡಲಾಯಿತು. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಕಾಮಗಾರಿ 2018 ರ ಡಿಸೆಂಬರ್‌ನಲ್ಲಿ ಪ್ರಾರಂಭವಾಯಿತು. ರಸ್ತೆ ಪರ್ಕಳ ಪಟ್ಟಣದ ಮೂಲಕ ಹಾದುಹೋಗುವ ಕಾರಣ ಅಲ್ಲಿ ಭೂ ಸ್ವಾಧೀನ ಮಾಡುವ ಅಗತ್ಯವಿದೆ. ಈ ಪ್ರಕ್ರಿಯೆಯು ಮುಕ್ತಾಯದ ಹಂತದಲ್ಲಿದ್ದಾಗ, ಕೊರೊನಾ ಲಾಕ್‌ಡೌನ್‌ ಜಾರಿಗೊಳಿಸಲಾಗಿತ್ತು. ಈ ಕಾರಣದಿಂದಾಗಿ ಎಲ್ಲಾ ಪ್ರಕ್ರಿಯೆಗಳು ಸ್ಥಗಿತಗೊಂಡವು. ಭೂಸ್ವಾಧೀನ ಪ್ರಕ್ರಿಯೆಯು ವಿಳಂಬವಾಗುತ್ತಿದ್ದಂತೆ, ರಸ್ತೆ ಕಾಮಗಾರಿಗಳು ಸ್ಥಗಿತಗೊಂಡಿವೆ. ಮೇ 2021 ರೊಳಗೆ ಎಲ್ಲಾ ಪ್ರಕ್ರಿಯೆಗಳು ಹಾಗೂ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳ್ಳಲಿವೆ” ಎಂದು ಶಾಸಕ ರಘುಪತಿ ಭಟ್‌ ಹೇಳಿದರು. ಫೆಬ್ರವರಿಯಲ್ಲಿ ಪರ್ಕಳ ಸಮೀಪದ ಭೂಮಿಯನ್ನು ಬಿಟ್ಟುಕೊಡುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮತ್ತು ಭೂಮಾಲೀಕ ನಡುವೆ ಪರ್ಕಳದ ಬಿ ಎಂ ಸ್ಕೂಲ್‌ನಲ್ಲಿ ಸಭೆ ಕರೆಯಲಾಗಿತ್ತು. ರಸ್ತೆಗಾಗಿ ಮಾಲೀಕರು ತಮ್ಮ ಭೂಮಿಯನ್ನು ಬಿಟ್ಟುಕೊಡುವಂತೆ ಮನವಿ ಮಾಡಲಾಗಿದೆ. ಆದರೆ ಪರಿಹಾರದ ಮೊತ್ತವನ್ನು ವಿತರಿಸದ ಕಾರಣ ಮಾಲೀಕರು ತಮ್ಮ ಜಮೀನನ್ನು ಬಿಟ್ಟುಕೊಡಲು ಒಪ್ಪಲಿಲ್ಲ. ಒಂದು ವರ್ಷದಲ್ಲಿ 3 ಡಿ ನೊಟೀಫಿಕೇಶನ್‌ ನೀಡಬೇಕಾಗಿತ್ತು. ಆದರೆ ಸಾಂಕ್ರಾಮಿಕ ರೋಗದಿಂದಾಗಿ ಅದನ್ನು ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ, ಅವರು ಮತ್ತೆ 3 ಎ ನೊಟೀಫಿಕೇಶನ್‌ ಪ್ರಕಟಿಸಿದ್ದಾರೆ. ಪ್ರಕ್ರಿಯೆಗಳನ್ನು ಹೊಸದಾಗಿ ಪ್ರಾರಂಭಿಸಿದ್ದಾರೆ” ಎಂದು ತಿಳಿಸಿದರು. “ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿ ನಡೆಸಿದ ಸಭೆಯ ಬಳಿಕ 2021 ರ ಜನವರಿ 15 ರ ಮೊದಲು ಎಲ್ಲಾ ಭೂಮಾಲೀಕರಿಗೆ ಗರಿಷ್ಠ ಪರಿಹಾರವನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ” ಎಂದು ಹೇಳಿದರು. ಒಮ್ಮೆ ಹಣವನ್ನು ವಿತರಿಸಿದ ಬಳಿಕ ಕೆಲಸ ಪ್ರಾರಂಭಗೊಂಡು ಮುಂದಿನ ವರ್ಷ ಮೇ ವೇಳೆಗೆ ಪೂರ್ಣಗೊಳಿಸಲಾಗುವುದು. ಭೂ ಮಾಲೀಕರು ಈಗ ಭೂಮಿಯನ್ನು ಬಿಟ್ಟುಕೊಟ್ಟು ಬಳಿಕ ಹಣವನ್ನು ಸ್ವೀಕರಿಸಲು ಸಿದ್ಧರಿದ್ದರೆ, ರಸ್ತೆ ಕಾಮಗಾರಿಗಳನ್ನು ತಕ್ಷಣ ಪ್ರಾರಂಭಿಸಲು ಇಲಾಖೆ ಸಿದ್ಧವಾಗಿದೆ. ನಮಗೆ ಭೂ ಮಾಲೀಕರ ಸಹಕಾರ ಬೇಕು” ಎಂದು ತಿಳಿಸಿದರು. ಈ ರಸ್ತೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸಲು ಯಾವ ಹಕ್ಕಿದೆ ಎಂದು ಹೇಳಿದ ಭಟ್‌ ಅವರು, “ಕಾಂಗ್ರೆಸ್, ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲು ಯೋಗ್ಯವಾಗಿದೆಯೇ ಎಂದು ಪರಿಶೀಲಿಸದೆ, ಯೋಜನೆಯನ್ನು ಅನುಮೋದಿಸಿತು. ಅವರ ದೋಷದಿಂದಾಗಿ, ಈಗಲೂ ಸಹ, ರಸ್ತೆಯ ಎರಡೂ ಬದಿಗಳಲ್ಲಿ ವಾಸಿಸುವ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ಅಭಿವೃದ್ಧಿಪಡಿಸಲು ಬಿಜೆಪಿ ಸರ್ಕಾರ ಅನುದಾನ ನೀಡಿತು. ನಮ್ಮ ಸರ್ಕಾರವು ಈ ರಸ್ತೆಗೆ 99.86 ಕೋಟಿ ರೂ. ಮತ್ತು ಆದಿ ಉಡುಪಿ-ಮಲ್ಪೆ ನಾಲ್ಕು ಪಥದ ರಸ್ತೆ ಕಾಮಗಾರಿಗಳ ಅಭಿವೃದ್ಧಿಗೆ 91 ಕೋಟಿ ರೂ.ಗಳನ್ನು ನೀಡಿತು. ಪರ್ಕಳ ಪುರಸಭೆಯಲ್ಲಿ ಬಿಜೆಪಿ ಆಡಳಿತವಿದ್ದ ಸಂದರ್ಭ ಭೂಸ್ವಾಧೀನಕ್ಕಾಗಿ ಮೂರು ಕೋಟಿ ರೂಪಾಯಿ ಅನುದಾನವನ್ನು ಮೀಸಲಿಟ್ಟಿತ್ತು. ಆದರೆ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡಾಗ, ಈ ಅನುದಾನವನ್ನು ಹಿಂತೆಗೆದುಕೊಂಡಿತು. ಈಗ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಉಳಿದಿದೆ” ಎಂದು ಹೇಳಿದರು. ಅಭಿವೃದ್ಧಿಗೆ ಯಾವಾಗಲೂ ಅಡ್ಡಿಯಾಗಿದ್ದ ಕಾಂಗ್ರೆಸ್ ಈಗ ಪ್ರತಿಭಟನೆ ನಡೆಸುತ್ತಿದೆ. ಹಿಂದಿನ ಕಾಂಗ್ರೆಸ್ ಶಾಸಕರು ತಮ್ಮ ವಿಧಾನಸಭಾ ಕ್ಷೇತ್ರದೊಳಗೆ ಯಾವುದೇ ರಸ್ತೆಯನ್ನು ನಾಲ್ಕು ಪಥದ ರಸ್ತೆಯಾಗಿ ಅಭಿವೃದ್ಧಿಪಡಿಸಲಿಲ್ಲ. ಅವರ ಅವಧಿಯಲ್ಲಿ ರಸ್ತೆ ರಿಪೇರಿ ಮಾತ್ರ ಮಾಡಲಾಗಿದೆ. ಅವರು ಯಾವುದೇ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿಲ್ಲ. ಭೂಸ್ವಾಧೀನ ಪಡಿಸಿ ಯಾವುದೇ ರಸ್ತೆಗಳ ಅಗಲೀಕರಣ ಮಾಡಿಲ್ಲ. ಕಳೆದ ಎರಡು ವರ್ಷಗಳಲ್ಲಿ ಬಿಜೆಪಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಮತ್ತು ರಸ್ತೆ ಅಗಲೀಕರಣ ಕಾರ್ಯಗಳನ್ನು ಕಾಂಗ್ರೆಸ್ ನಾಯಕರು ನೋಡಬೇಕು. ಅಭಿವೃದ್ಧಿಯ ವಿಷಯವನ್ನು ರಾಜಕೀಯಗೊಳಿಸುವುದನ್ನು ಅವರು ನಿಲ್ಲಿಸಬೇಕು” ಎಂದು ಹೇಳಿದರು.