ಪರೋಪಕಾರಿಗಳಾಗಿ ಬದುಕಿದಾಗ ಜೀವನ ಸಾರ್ಥಕವಾಗುತ್ತದೆ: ಕೆ. ಪ್ರತಾಪ ಸಿಂಹ

ಉಜಿರೆ, ಮಾ.೧೫- ದೇವರು ನಮಗೆ ನೀಡಿದ ಶಕ್ತಿ-ಸಾಮರ್ಥ್ಯ, ಸಂಪತ್ತು ಹಾಗೂ ಅವಕಾಶವನ್ನು ಪರೋಪಕಾರಿಗಳಾಗಿ ಅಶಕ್ತರ ನೆರವಿಗೆ ಬಳಸಿದಾಗ ಜೀವನ ಪಾವನವಾಗುತ್ತದೆ, ಸಾರ್ಥಕವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ ಸಿಂಹ ನಾಯಕ್ ಹೇಳಿದರು.

ಉಜಿರೆಯಲ್ಲಿ ಶ್ರೀ ಜನಾರ್ದನ ಸ್ವಾಮಿ ಸೇವಾ ಸಮಿತಿಯ “ಬದುಕು ಕಟ್ಟೋಣ ಬನ್ನಿ” ತಂಡದ ನೇತೃತ್ವದಲ್ಲಿ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆ ಮತ್ತು ಎ.ಜೆ. ಆಸ್ಪತ್ರೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಬಿ.ಕೆ. ಧನಂಜಯ್ ರಾವ್ ಮಾತನಾಡಿ ರಕ್ತದಾನ ಶ್ರೇಷ್ಠ ದಾನವಾಗಿದ್ದು, ರಕ್ತದಾನದಿಂದ ಅನೇಕ ಮಂದಿಯ ಪ್ರಾಣ ಉಳಿಸಬಹುದು ಎಂದರು.

ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಶಾಸಕ ಹರೀಶ್ ಪೂಂಜ, ಶರತ್‌ಕೃಷ್ಣ ಪಡ್ವೆಟ್ನಾಯ, ಚಲನಚಿತ್ರ ನಟ ಅರವಿಂದ ಬೋಳಾರ್ ಮತ್ತು ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾವತಿ ಉಪಸ್ಥಿತರಿದ್ದರು.

ರಾಜೇಶ್ ಪೈ ಸ್ವಾಗತಿಸಿದರು. ತಿಮ್ಮಯ್ಯ ನಾಯ್ಕ ಧನ್ಯವಾದವಿತ್ತರು.

ರಕ್ತದಾನಿಗಳಿಂದ ೩೪೦ ಯುನಿಟ್ ರಕ್ತ ಸಂಗ್ರಹಿಸಲಾಯಿತು.