ಪರೋಪಕಾರದಿಂದ ಜೀವನ ಸಾರ್ಥಕ

ಬೀದರ್:ಫೆ.23: ಪರೋಪಕಾರ ಕಾರ್ಯಗಳಿಂದ ಜೀವನ ಸಾರ್ಥಕವಾಗುತ್ತದೆ ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ನುಡಿದರು.

ಭಾಲ್ಕಿ ತಾಲ್ಲೂಕಿನ ಕೊಟಗ್ಯಾಳ ಗ್ರಾಮದಲ್ಲಿ ಆಯೋಜಿಸಿದ್ದ ಆಧಾತ್ಮಿಕ ಪ್ರವಚನ ಹಾಗೂ ತುಮಕೂರಿನ ಸಿದ್ಧಗಂಗಾ ಮಠದ ಸಂಘಸಿರಿ ಪ್ರಶಸ್ತಿ ಪುರಸ್ಕøತ ದೇವೇಂದ್ರ ಕರಂಜೆ ಅವರ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಹುಟ್ಟು-ಸಾವು ಮುಖ್ಯವಲ್ಲ. ಬದುಕಿದ್ದಾಗ ಎಷ್ಟು ಜನರಿಗೆ ಉಪಕಾರಿಯಾದೇವು ಎನ್ನುವುದು ಮುಖ್ಯ ಎಂದು ಹೇಳಿದರು.

ಜೀವನವೇ ನಶ್ವರ. ಇಲ್ಲಿ ಯಾವುದೂ ಶಾಶ್ವತ ಅಲ್ಲ. ಹೀಗಾಗಿ ಸುಖ, ದುಃಖಗಳನ್ನು ಸಮನಾಗಿ ಸ್ವೀಕರಿಸಬೇಕು ಎಂದು ತಿಳಿಸಿದರು.

ಜಗತ್ತು ತೋರಿದ ತಂದೆ-ತಾಯಿಗೆ ಕಿಂಚಿತ್ತೂ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ವೃದ್ಧಾಪ್ಯದಲ್ಲಿ ಅವರ ಸೇವೆ ಮಾಡಬೇಕು. ಅತ್ತೆ-ಸೊಸೆ, ತಾಯಿ-ಮಗಳ ಹಾಗೆ ಇರಬೇಕು ಎಂದು ಹೇಳಿದರು.

ಬಸವಾದಿ ಶರಣರ ಜೀವನ ಚರಿತ್ರೆ ಓದಬೇಕು. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು. ಕಾಯಕ, ದಾಸೋಹ ತತ್ವಗಳ ಪಾಲನೆ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದರು.

ದೇವೇಂದ್ರ ಕರಂಜೆ ಸರಳ, ಸಜ್ಜನಿಕೆಗೆ ಹೆಸರಾಗಿದ್ದಾರೆ. ನಿರಂತರ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಘಸಿರಿ ಪ್ರಶಸ್ತಿ ಒಲಿದು ಬಂದ ಪ್ರಯುಕ್ತ ಸ್ವಗ್ರಾಮದಲ್ಲಿ ಅವರನ್ನು ಹೃದಯಸ್ಪರ್ಶಿಯಾಗಿ ಅಭಿನಂದಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಬೀದರ್‍ನ ಕರ್ನಾಟಕ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಬಸವರಾಜ ಬಲ್ಲೂರ ಮಾತನಾಡಿ, ಡಾ. ಬಸವಲಿಂಗ ಅವಧೂತರು ಅಪರೂಪದ ಸ್ವಾಮೀಜಿ ಆಗಿದ್ದಾರೆ. ಭಕ್ತರಲ್ಲಿ ಆಧ್ಯಾತ್ಮದ ಅರಿವು ಮೂಡಿಸುತ್ತಿದ್ದಾರೆ. ಸನ್ಮಾರ್ಗ ತೋರುತ್ತಿದ್ದಾರೆ. ಶಾರಿರೀಕ, ಮನೋರೋಗಗಳಿಂದ ಮುಕ್ತಗೊಳಿಸುತ್ತಿದ್ದಾರೆ ಎಂದು ಹೇಳಿದರು.

ಕೊಟಗ್ಯಾಳದ ನಾಗರಿಕ ಅಭಿನಂದನಾ ಸಮಿತಿ ವತಿಯಿಂದ ದೇವೇಂದ್ರ ಕರಂಜೆ ಅವರಿಗೆ ಬೃಹತ್ ಹೂಮಾಲೆ ಹಾಕಿ, ಶಾಲು ಹೊದಿಸಿ ಅಭಿನಂದಿಸಲಾಯಿತು.

ಇದಕ್ಕೂ ಮೊದಲು ಡಾ. ಬಸವಲಿಂಗ ಅವಧೂತರನ್ನು ಗ್ರಾಮದ ಬಸವೇಶ್ವರ ವೃತ್ತದಿಂದ ಕಾರ್ಯಕ್ರಮ ಸ್ಥಳವಾದ ಹುನುಮಾನ ಮಂದಿರದ ವರೆಗೆ ಭವ್ಯ ಮೆರವಣಿಗೆ ಮೂಲಕ ಕರೆ ತರಲಾಯಿತು.

ಕಳಸ ಹೊತ್ತ ಮಹಿಳೆಯರು ಮೆರವಣಿಗೆಯ ಮೆರುಗು ಹೆಚ್ಚಿಸಿದರು. ಮೆರವಣಿಗೆ ಉದ್ದಕ್ಕೂ ಬಸವಲಿಂಗ ಅವಧೂತರಿಗೆ ಜಯವಾಗಲಿ ಎನ್ನುವ ಘೋಷಣೆಗಳು ಮೊಳಗಿದವು.

ಗ್ರಾಮದ ಪ್ರಮುಖರಾದ ಬಿ.ಎಸ್. ಮಾಲಿಪಾಟೀಲ, ಮಲ್ಲಿಕಾರ್ಜುನ ಕರಂಜೆ, ರವೀಂದ್ರ ಕರಂಜೆ, ಅಶೋಕ ಮಾಲಿಪಾಟೀಲ, ಸೂರ್ಯಕಾಂತ ಬಿರಾದಾರ, ಕಲ್ಲಪ್ಪ ಹೂಗಾರ, ಶಿವಲಿಂಗಪ್ಪ ಕರಂಜೆ, ಶಿವಾನಂದ ಸ್ವಾಮಿ, ವೀರಶೆಟ್ಟಿ ಮಾಲಿಪಾಟೀಲ, ಓಂಕಾರ ಮಾಲಿಪಾಟೀಲ, ಗಣಪತಿ ಎಚ್. ಕರಂಜೆ, ಬಸವರಾಜ ಜೆ. ಕರಂಜೆ ಇದ್ದರು.