ಪರುತನಾಯಕ ತಾಂಡಾದಲ್ಲಿ ನಿವೃತ್ತಗೊಂಡ ಮತ್ತು ವರ್ಗಾವಣೆಗೊಂಡ ಶಿಕ್ಷಕರ ಅದ್ದೂರಿ ಸನ್ಮಾನ

ಹುಣಸಗಿ :ಅ.11: ಪಟ್ಟಣ ಸಮೀಪದ ಪುರತನಾಯಕ ತಾಂಡಾದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕರು ಹಾಗೂ ಸದ್ಯ ವರ್ಗಾವಣೆಗೊಂಡ ಶಿಕ್ಷಕರನ್ನು ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.

ಗ್ರಾಮದ ಶಾಲೆಯಿಂದ ಸೇವಾಲಾಲ್ ದೇವಸ್ಥಾನದ ವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ತಾಂಡಾದ ಮಹಿಳೆಯರು ವಿವಿಧ ಹಾಡು ಹೇಳುತ್ತಾ ನೃತ್ಯ ಮಾಡುವ ಮೂಲಕ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಿದ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿದರು.

ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಬಸಪ್ಪ ಹಡಪದ್ ರವರು ಮಾತನಾಡಿ 1994ರಲ್ಲಿ ಈ ತಾಂಡಾದಲ್ಲಿ ಶಾಲೆ ಆರಂಭಿಸಲಾಯಿತು. ಆ ಸಂದರ್ಭದಲ್ಲಿ ಲಭ್ಯವಿರುವ ಕಟ್ಟಡವನ್ನೇ ಬಳಕೆ ಮಾಡಿಕೊಂಡು ಇಲ್ಲಿನ ಮಕ್ಕಳಿಗೆ ಶಿಕ್ಷಣ ನೀಡಲಾಯಿತು. ಆದರೆ ಅದಕ್ಕೆ ಪ್ರತಿಯಾಗಿ ನಮ್ಮನ್ನು ಕರೆಸಿ ಗೌರವಿಸಿದ ಕ್ಷಣ ಜೀವನದಲ್ಲಿಯೇ ಮರೆಯದಂತಾಗಿದೆ ಎಂದರು.

ಶಾಲೆಯ ಶಿಕ್ಷಕ ವೀರನಗೌಡ ಮಾತನಾಡಿ ಈ ಶಾಲೆಯ ಆರಂಭದಿಂದ ಸುಮಾರು 13ವರ್ಷ ಸೇವೆ ಸಲ್ಲಿಸಲಾಗಿದ್ದು ನಮ್ಮಲ್ಲಿ ವಿದ್ಯೆ ಕಲಿತ ಮಕ್ಕಳು ಇಂದು ವೈದ್ಯರು, ಎಂಜಿನಿಯರಿಂಗ್, ಹಾಗೂ ಉದ್ಯಮಿ, ಪ್ರಗತಿಪರ ರೈತರಾಗಿರುವುದು ಕಂಡು ಸಾರ್ಥಕ ಎನಿಸುತ್ತದೆ ಎಂದರು.

ಈ ಕಾರ್ಯಕ್ರಮವನ್ನು ರಾಜನಕೋಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೋತಿ ಬಾಯಿ ಲಕ್ಷ್ಮಣ ರವರು ಉದ್ಘಾಟಿಸಿದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರಫೀಕ್ ಮಳ್ಳಿಕರ್ ಹಾಗೂ ಬಂಗಾರಪ್ಪ, ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಬಸವನಗೌಡ ವಠಾರ ಮಾತನಾಡಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಬಸಪ್ಪ ಹಡಪದ್, ಈರಪ್ಪ,ಸಿಂಪಿಗೇರ, ವೀರನಗೌಡ ಪಾಟೀಲ್, ಈರಪ್ಪ ಹಡಪದ್, ಹಾಗೂ ವರ್ಗಾವಣೆಗೊಂಡ ಸಂತೋಷ್ ನಾಯಕ, ಹಸೀನಾಮುಲ್ಲಾ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಿ ಆರ್ ಸಿ ರಮೇಶ್ ವನಹಳ್ಳಿ,ಚಂದಪ್ಪ ಸಾಹುಕಾರ, ಭೂದಾನಿ ಲಚ್ಚಪ್ಪ ಪೂಜಾರಿ, ಎಸ್ ಡಿ ಎಂ ಸಿ ಅಧ್ಯಕ್ಷ ಕೃಷ್ಣಾ, ಶಾಂತಿಲಾಲ್ ಧರ್ಮಣ್ಣ ಯಮನಪ್ಪ, ತಾಂಡಾದ ಹಳೇ ವಿದ್ಯಾರ್ಥಿಗಳಾದ ಗುಂಡುರಾವ್, ಸುನೀಲ್, ರವಿ, ಕೃಷ್ಣಾ, ರಮೇಶ, ಶ್ವೇತಾ, ಸುನೀಲ್,ಗೋವಿಂದ,ಜೀತಲಾಲ್, ಆನಂದ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.