ಪರೀಕ್ಷೆ ಹಬ್ಬದಂತೆ ಸಂಭ್ರಮಿಸಿ

ಬೀದರ್:ಮಾ.23: ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಹಬ್ಬದಂತೆ ಸಂಭ್ರಮಿಸಬೇಕು ಎಂದು ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ ಹೇಳಿದರು.
ನಗರದ ಶ್ರೀಮತಿ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆತ್ಮವಿಶ್ವಾಸ ಹಾಗೂ ಧೈರ್ಯದಿಂದ ಪರೀಕ್ಷೆ ಬರೆಯಬೇಕು ಎಂದು ತಿಳಿಸಿದರು.
ವಿದ್ಯಾರ್ಥಿ ಜೀವನದಲ್ಲಿ ಪ್ರೌಢಶಾಲಾ ಹಂತ ಬಹಳ ಮಹತ್ವದ್ದಾಗಿದೆ. ಹೀಗಾಗಿ ಛಲದೊಂದಿಗೆ ಸಾಧನೆ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.
ಮುಖ್ಯಶಿಕ್ಷಕ ಲಕ್ಷ್ಮಣ ಪೂಜಾರಿ ಮಾತನಾಡಿ, ಶಿಕ್ಷಣದ ಬೇರು ಕಹಿಯಾದರೂ ಅದರ ಫಲ ಸಿಹಿಯಾಗಿರುತ್ತದೆ ಎಂದು ನುಡಿದರು.
ಸತ್ಯವಂತರು, ನೀತಿವಂತರಿಗೆ ಸಮಾಜ ಗೌರವಿಸುತ್ತದೆ. ವಿದ್ಯಾರ್ಥಿಗಳು ಅಂತಹ ವ್ಯಕ್ತಿತ್ವ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಚಂದ್ರಪ್ಪ ಗೌರಶೆಟ್ಟಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಚಂದ್ರಪ್ಪ ಭತಮುರ್ಗೆ ಮಾತನಾಡಿ, ಮನುಷ್ಯ ಜೀವನದಲ್ಲಿ ಎಲ್ಲವನ್ನೂ ಸಾಧಿಸಬಹುದು. ಆದರೆ, ಚಾರಿತ್ರ್ಯ ಗಳಿಸುವುದು ಬಹಳ ಕಠಿಣ. ಚಾರಿತ್ರ್ಯವಿಲ್ಲದ ಮನುಷ್ಯ ಸುಗಂಧವಿಲ್ಲದ ಹೂವಿನಂತೆ ಎಂದರು.
ಶಾಲೆಯ ಹಳೆಯ ವಿದ್ಯಾರ್ಥಿನಿಯರಾದ ಚೇತನಾ ಗುಂಡೆರಾವ್, ದೀಪಿಕಾ, ನಂದಿನಿ, ಅಕ್ಷತಾ ಮಾತನಾಡಿದರು.
ಭಾರತೀಯ ಸೇನೆಯಿಂದ ನಿವೃತ್ತರಾದ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಧನರಾಜ ಗುಮ್ಮಾ ಹಾಗೂ ರಾಜೇಶಕುಮಾರ ಅವರನ್ನು ಸನ್ಮಾನಿಸಲಾಯಿತು.
ಶ್ರೀ ಸಿದ್ಧಾರೂಢ ಪದವಿ ಕಾಲೇಜು ಪ್ರಾಚಾರ್ಯ ನಾಗಪ್ಪ ಜಾನಕನೋರ, ಗೋಪಾಲ್ ಕುಲಕರ್ಣಿ, ನಿರ್ಮಲಾ ಕುಲಕರ್ಣಿ, ಸತ್ಯವಾನ್ ಭೋಸ್ಲೆ, ಸಾಗರ ಎಂ, ನಾಗಪ್ಪ ಬಿರಾದಾರ, ಮುರಹರಿ ಬಿರಾದಾರ, ಶರಣಬಸಪ್ಪ ಹೊಸಮನಿ, ಧೂಳಪ್ಪ, ಕಾಶೀನಾಥ ಸಂಖ ಇದ್ದರು.
ಲತಾ, ಸೃಷ್ಟಿ ನಿರೂಪಿಸಿದರು. ದೇವಿಕಾ ವಂದಿಸಿದರು.