ರಾಜ್ಯ ಬಂದ್ ಕೈಬಿಟ್ಟ ಕಾಂಗ್ರೆಸ್

ಬೆಂಗಳೂರು, ಮಾ. ೮- ರಾಜ್ಯ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ಕಾಂಗ್ರೆಸ್ ಪಕ್ಷ ನಾಳೆ ನಡೆಸಲು ಉದ್ದೇಶಿಸಿದ್ದ ಕರ್ನಾಟಕ ಬಂದ್‌ನ್ನು ಕೈಬಿಟ್ಟಿದೆ.
ದ್ವಿತೀಯ ಪಿಯುಸಿ ಸೇರಿದಂತೆ ರಾಜ್ಯಾದ್ಯಂತ ಶಾಲಾ-ಕಾಲೇಜುಗಳ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಒತ್ತಡದ ಮೇರೆಗೆ ನಾಳೆ ನಡೆಸಲು ಉದ್ದೇಶಿಸಿದ್ದ ಸಾಂಕೇತಿಕ ಕರ್ನಾಟಕ ಬಂದ್‌ನ್ನು ವಾಪಸ್ ತೆಗೆದುಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ಕಾಂಗ್ರೆಸ್ ನಾಯಕರ ಜತೆ ಸಮಾಲೋಚನೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ. ನಾಳೆ ಯಾವುದೇ ಬಂದ್ ಇರುವುದಿಲ್ಲ ಎಂದರು.
ರಾಜ್ಯ ಬಿಜೆಪಿ ಸರ್ಕಾರದ ಮಿತಿ ಮೀರಿದ ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ನಾಳೆ ಬೆಳಿಗ್ಗೆ ೯ ಗಂಟೆಯಿಂದ ೧೧ ಗಂಟೆಯವರೆಗೂ ೨ ಗಂಟೆಗಳ ಕಾಲ ಸಾಂಕೇತಿಕ ಬಂದ್‌ಗೆ ಕಾಂಗ್ರೆಸ್ ಕರೆ ನೀಡಿತ್ತು. ಪರೀಕ್ಷೆಗಳ ಕಾರಣ ಬಂದ್ ಕರೆಯನ್ನು ಕಾಂಗ್ರೆಸ್ ಹಿಂಪಡೆದಿದೆ. ಹಾಗಾಗಿ ಸಾಮಾನ್ಯ ಜನಜೀವನ ಮಾಮೂಲಿಯಂತೆ ಇರಲಿದೆ.