ಪರೀಕ್ಷೆ ಜ್ಞಾನದ ಮಟ್ಟ ಅಳೆಯುವ ಮಾನದಂಡ’

ಪರೀಕ್ಷೆ ಎನ್ನುವುದು ಯುದ್ಧವಲ್ಲ’ ನೀವು ಕಲಿತ ವಿದ್ಯೆಯನ್ನು ಅಳೆಯುವ ಮಾನದಂಡವಾಗಿದೆ. ಪರೀಕ್ಷೆಯನ್ನು ಯಾವುದೇ ಒತ್ತಡಗಳಿಲ್ಲದೆ ಸಂತೋಷ ಮತ್ತು ಉತ್ಸಾಹದಿಂದ ಎದುರಿಸುವ ಪ್ರಯತ್ನ ನಿಮ್ಮದಾಗಬೇಕು. ಒತ್ತಾಯದ ಓದು ಮನಸ್ಸಿಗೆ ನಾಟುವುದಿಲ್ಲ. ಯಾವುದೇ ವಿಷಯವನ್ನು ಸಮಗ್ರವಾಗಿ ತಿಳಿದುಕೊಳ್ಳಲು ಪ್ರಯತ್ನಿಸಿ. ಉತ್ತರಿಸಲು ಕ್ಲಿಷ್ಟ ಎನಿಸುವ ಪ್ರಶ್ನೆಗಳಿಗೆ ಪರೀಕ್ಷೆಗೆ ಮುನ್ನವೇ ಪರಿಹಾರ ಹುಡುಕಿಕೊಳ್ಳುವುದು ಉತ್ತಮ.ಒಮ್ಮೆ ಓದಿದ ವಿಷಯವನ್ನು ಮತ್ತೊಮ್ಮೆ ಮೆಲಕು ಹಾಕಬೇಕು. ಅಭ್ಯಾಸ ಮತ್ತು ಪ್ರಯತ್ನ ನಿರಂತರವಾಗಿರಬೇಕು. ಎಲ್ಲವೂ ಸಾಧ್ಯ ಎಂದುಕೊಂಡು ಮುಂದುವರೆದರೆ ಪರೀಕ್ಷೆ ಎದುರಿಸುವ ಆತ್ಮವಿಶ್ವಾಸ ಹಾಗೂ ಧೈರ್ಯ ವೃದ್ದಿಸಲಿದೆ. ನಿಮ್ಮ ಅಭ್ಯಾಸ ಏಕಮುಖವಾಗಿರದೆ ಬಹುಮುಖ ಆಯಾಮಗಳು ಮೂಲಕ ಮುಂದುವರೆಯಬೇಕು. ಓದಿದ ವಿಷಯ ಮರೆತು ಹೋಗದಂತೆ ಸ್ನೇಹಿತರೊಂದಿಗೆ ಚರ್ಚಿಸಬೇಕು. ಸಾಧ್ಯವಾದರೆ ಮುಖ್ಯಾಂಶಗಳು ಹಾಗೂ ಸೂತ್ರಗಳನ್ನು ಟಿಪ್ಪಣಿ ಮಾಡಿಕೊಂಡಿರಬೇಕು. ಬಿಡುವಿನ ವೇಳೆಯಲ್ಲಿ ಅವುಗಳ ಮೇಲೆ ಕಣ್ಣು ಆಡಿಸಬೇಕು.ಪರೀಕ್ಷೆ ಬಂದಾಗ ಮಾತ್ರ ನಾವು ಓದುವ ಮನೋಧೋರಣೆ ನಿಲ್ಲಿಸಬೇಕು. ಅಭ್ಯಾಸ ನಿರಂತರವಾಗಿರಬೇಕು. ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಆತಂಕ ಸೃಷ್ಟಿಯಾಗುವುದು ಸಹಜ. ಆದ ಕಾರಣ ನಿರಂತರ ಕಲಿಕೆ ಮತ್ತು ಅನ್ಯ ವಿಷಯಗಳ ತಿಳಿದುಕೊಳ್ಳುವ ಆಸಕ್ತಿಯಿಂದ ನಮ್ಮ ಜ್ಞಾನದ ಮಟ್ಟ ವೃದ್ಧಿಯಾಗುತ್ತದೆ.  ಅಂಕಗಳ ಪಡೆಯುವುದರ ಬಗ್ಗೆ ಸಾಕಷ್ಟು ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಯಾಗುವುದು ಸಹಜ. ಇನ್ನು ಕೆಲವರು ಅದನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ಕೂಡ ಕಾಣುತ್ತೇವೆ. ನಾವು ಮಾಡುವ ಕೆಲಸ ಮತ್ತು ಅಭ್ಯಾಸ ವಿಶ್ವಾಸದಿಂದ ಕೂಡಿರಬೇಕು.  ಆತಂಕವಿಲ್ಲದ ಓದಿನಿಂದ. ಅಂಕಗಳ ಗಳಿಕೆ ಪ್ರಮಾಣವೂ ಸಹಜವಾಗಿಯೇ ವೃದ್ಧಸಲಿದೆ. ಪ್ರಶ್ನೆಪತ್ರಿಕೆ ಯಲ್ಲಿ ಕೇಳಿರುವ ಪ್ರಶ್ನೆಗಳನ್ನು ಸರಿಯಾಗಿ ಅರ್ಥೈಸಿಕೊಂಡು ಅಂಕಗಳಿಗೆ ಅನುಗುಣವಾಗಿ ಅಂದವಾಗಿ ಉತ್ತರ ಬರೆಯಬೇಕು. ಪರೀಕ್ಷೆ ಸಮಯದಲ್ಲಿ ಒತ್ತಡಕ್ಕೆ ಒಳಗಾಗಿ ಏಕಾಗ್ರತೆ ಮತ್ತು ಆರೋಗ್ಯ ಕಳೆದುಕೊಳ್ಳಬೇಡಿ. ಆರೋಗ್ಯವೇ ಭಾಗ್ಯ, ಆರೋಗ್ಯ ಉತ್ತಮವಾಗಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಇನ್ನು ಪೋಷಕರು ತಮ್ಮ ಮಕ್ಕಳ ಬುದ್ಧಿವಂತಿಕೆ ಮತ್ತು ಜ್ಞಾನದ ಮಟ್ಟವನ್ನು ಗಮನಿಸಿ ಅದರ ಆಧಾರದ ಮೇಲೆ ಸುಧಾರಣೆ ತರುವ ಪ್ರಯತ್ನ ಮಾಡಬೇಕು. ಯಾವುದೇ ಕಾರಣಕ್ಕೂ ಮಕ್ಕಳ ಮೇಲೆ ಒತ್ತಡ ಹೇರಬಾರದು. ಮಕ್ಕಳ ಆತ್ಮವಿಶ್ವಾಸಕ್ಕೆ ಧಕ್ಕೆ ಆಗದಂತೆ ತಿಳಿಸಿ ಹೇಳಬೇಕು. ಸತತ ಪರಿಶ್ರಮ ಮತ್ತು ಪ್ರಯತ್ನ ತಮ್ಮದಾಗಿರಬೇಕು.ಕೊನೆಯದಾಗಿ ಪೋಷಕರಿಗೆ ಒಂದು ಕಿವಿಮಾತು ಸಾಕಷ್ಟು ಜನ ಪೋಷಕರಲ್ಲಿ ತಮ್ಮ ಮಕ್ಕಳ ಬಗ್ಗೆ ಅತಿಯಾದ ಆಸೆಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಕೆಲವು ಪೋಷಕರು ಮಗುವಿನ ಮಾನಸಿಕ ಸ್ಥಿತಿಗಳನ್ನು ಅರ್ಥಮಾಡಿಕೊಳ್ಳದೆ ತಮ್ಮ ಆಸೆಗಳನ್ನು ಆಕಾಂಕ್ಷೆಗಳನ್ನು ಮಗುವಿಗೆ ಒತ್ತಡ ಏರುವುದರಿಂದ ಬೆಳವಣಿಗೆ ಕುಂಠಿತಗೊಳ್ಳುತ್ತದೆ.  ಮಗುವಿನ  ಜ್ಞಾನ,ಪ್ರತಿಭೆಯ ಆಧಾರದ ಮೇಲೆ ಯಾವುದೇ ಕ್ಷೇತ್ರವಾಗಲಿ ಪ್ರೋತ್ಸಾಹಿಸುವುದು ಬಹಳ ಮುಖ್ಯ   ಆಗ ಮಾತ್ರ ಮಗುವಿನ ಮನೋವಿಕಾಸ ಮತ್ತು ಸಮಾಜದಲ್ಲಿ  ಶೈಕ್ಷಣಿಕ ಮತ್ತು  ಸಾಂಸ್ಕೃತಿಕ ವಿವಿಧ ಕ್ಷೇತ್ರಗಳಲ್ಲಿ  ತಮ್ಮ ಕೊಡುಗೆಯನ್ನು ಕೊಡುವುದರ ಜೊತೆಗೆ ಸಾಧನೆ ಮಾಡಲು ಪ್ರಯತ್ನಿಸುತ್ತಾರೆ.