
ಶಿವಮೊಗ್ಗ.ಮಾ.೧೪ : ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆಗಳನ್ನು ಗೆದ್ದರೆ ಸಾಧನೆಯ ಶಿಖರವನ್ನು ಏರಬಹುದು ಎಂದು ಖ್ಯಾತ ವಾಗ್ಮೀ ಅಕ್ಷಯ ಗೋಖಲೆ ಹೇಳಿದರು.
ನಗರದ ಆದಿಚುಂಚನಗಿರಿ ಸಂಯುಕ್ತ ಆಂಗ್ಲಮಾಧ್ಯಮ ಪ್ರೌಢಶಾಲೆಯ ವತಿಯಿಂದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕಲಿಕಾ ಕೌಶಲ್ಯ ಕಾರ‍್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಪರೀಕ್ಷೆಗಳನ್ನು ಎದುರಿಸುವುದೇ ಒಂದು ಕೌಶಲ್ಯ ಎಂದರು.ಬದುಕನ್ನು ನೋಡುವ ರೀತಿ ಬಹಳ ಮುಖ್ಯವಾಗಿರುತ್ತದೆ. ನಮ್ಮ ಆಲೋಚನಾ ಶಕ್ತಿ ಬದುಕನ್ನು ರೂಪಿಸುತ್ತದೆ. ನಮ್ಮ ಆಲೋಚನೆ ಉತ್ತಮ ರೀತಿಯಲ್ಲಿ ಇದ್ದರೆ ನಮ್ಮ ಬದುಕು ಸಹ ಅದೇ ದಾರಿಯಲ್ಲಿ ಸಾಗುತ್ತದೆ. ನಮ್ಮ ಯೋಚನೆ ಹಾಗೂ ಜೀವನದ ಮಾರ್ಗ ದುಮಾರ್ಗದಲ್ಲಿ ಸಾಗಿದರೆ ಬದುಕು ದುಸ್ಥರವಾಗುತ್ತದೆ ಎಂದು ಒಂದು ಕಥೆಯ ಮೂಲಕ ವಿದ್ಯಾರ್ಥಿಗಳಿಗೆ ಮನ ಮುಟ್ಟುವ ರೀತಿಯಲ್ಲಿ ಹೇಳಿದರು.
ಮೊಬೈಲ್ ಬಳಕೆ ಅತಿಯಾದರೆ ಅದು ನಮ್ಮ ಜೀವನವನ್ನೇ ಹಾಳು ಮಾಡುತ್ತದೆ. ಅದನ್ನು ಹಿತಮಿತವಾಗಿ ಬಳಸಿದರೆ ನಮ್ಮ ಜೀವನಕ್ಕೆ ಸಹಾಯ ಮಾಡುತ್ತದೆ. ಆದರೆ ವಿದ್ಯಾರ್ಥಿಗಳಾದ ನಿಮಗೆ ಅದರಲ್ಲಿ ಕೆಟ್ಟದ್ದನ್ನು ಬಳಸಿಕೊಳ್ಳುವ ಮನಸ್ಥಿತಿಯೇ ಹೆಚ್ಚಾಗಿರುತ್ತದೆ. ಆದ್ದರಿಂದ ಪರೀಕ್ಷೆ ಮುಗಿಯುವ ತನಕ ಮೊಬೈಲನ್ನು ಮುಟ್ಟದೇ ಪುಸ್ತಕದ ಮೊರೆ ಹೋಗಿ ಅದು ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ ಎಂದ ಅವರು, ಪರೀಕ್ಷೆಗೆ ಕೆಲವೇ ದಿನಗಳು ಇರುವ ಈ ಸಂದರ್ಭದಲ್ಲಿ ಪ್ರತಿ ನಿಮಿಷವನ್ನೂ ಕೂಡ ವ್ಯಯಮಾಡದೇ ಸದುಪಯೋಗ ಪಡಿಸಿಕೊಂಡು ಅಭ್ಯಾಸ ಮಾಡಿದ್ದೇ ಆದರೆ ಪರೀಕ್ಷೆಯಲ್ಲಿ ನಿಮ್ಮ ನಿರೀಕ್ಷೆಯ ಗೋಲನ್ನು ಮುಟ್ಟಲು ಸಾಧ್ಯವಾಗುತ್ತದೆ ಎಂದರು.