ಔರಾದ :ಮಾ.27: ಮಕ್ಕಳು ಯಾವುದೇ ಆತಂಕ ಪಡದೆ ಧೈರ್ಯದಿಂದ ಪರೀಕ್ಷೆ ಎದುರಿಸಲು ಮಾನಸಿಕವಾಗಿ ಸಿದ್ದರಾಗುವಂತೆ ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ನುಡಿದರು.
ತಾಲೂಕಿನ ಸಂತಪೂರ ಅನುಭವ ಮಂಟಪ ಪ್ರೌಢಶಾಲಾ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ಪರಿಶ್ರಮದಿಂದ ಅಭ್ಯಾಸ ಮಾಡಿರುವ ಮಕ್ಕಳು ಸಂಭ್ರಮದಿಂದ ಪರೀಕ್ಷೆ ಬರೆಯುವಂತೆ ತಿಳಿ ಹೇಳಿದರು.
ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳು ಬದುಕಿಗೆ ಅತಿ ಅವಶ್ಯಕವಾಗಿದ್ದು, ಶಿಕ್ಷಣದೊಂದಿಗೆ ಸಂಸ್ಕಾರಕ್ಕೂ ಮಹತ್ವ ನೀಡಿ ಬದುಕಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಹಿರೇಮಠ ಸಂಸ್ಥಾನ ಆಡಳಿತಾಧಿಕಾರಿ ಮೋಹನರೆಡ್ಡಿ, ಎಕಲಾರ ಶಾಲಾ ಶಿಕ್ಷಕ ಬಾಲಾಜಿ ಅಮರವಾಡಿ ಮಾತನಾಡಿದರು. ಹತ್ತನೇ ತರಗತಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅನುಭವ ಹಂಚಿಕೊಂಡರು. ಮುಖ್ಯ ಶಿಕ್ಷಕ ಸಂಗಮೇಶ ಹಿರೇಮಠ, ಶಿಕ್ಷಕರಾದ ಸಂಗಮೇಶ ಬ್ಯಾಳೆ, ಉಮಾಕಾಂತ ಮುಗಟೆ, ಸಾಯಿನಾಥ ಕಾಂಬಳೆ, ಮಾರುತಿ ಗಾದಗೆ, ತಾನಾಜಿ ಸೇರಿದಂತೆ ಇನ್ನಿತರರಿದ್ದರು.