ಪರೀಕ್ಷೆ ಇಲ್ಲದೆ 1 ರಿಂದ 9ನೇ ತರಗತಿ ಪಾಸ್ ಮಾಡಲು ಚಿಂತನೆ

ಬೆಂಗಳೂರು,ಮಾ.೨೮- ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವುದರಿಂದ ೧ ರಿಂದ ೯ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ಉತ್ತೀರ್ಣಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ.
ಈ ಸಂಬಂಧ ನಾಳೆ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ಬೆಂಗಳೂರಿನಲ್ಲಿಂದು ಸುದ್ದಿಗಾರರಿಗೆ ತಿಳಿಸಿದರು.
೧ ರಿಂದ ೯ನೇ ತರಗತಿವರೆಗೆ ಎಲ್ಲರನ್ನೂ ಉತ್ತೀರ್ಣ ಮಾಡಬೇಕು ಎಂದು ಸರ್ಕಾರ ಸೂಚಿಸಿದೆ. ಪರೀಕ್ಷೆ ಮಾಡದೆ ತೇರ್ಗಡೆ ಮಾಡುವ ಬಗ್ಗೆ ಮಾಹಿತಿ ಇಲ್ಲ. ಶಿಕ್ಷಣ ಸಚಿವರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.
ನಾಗಪುರ ಮಹಾರಾಷ್ಟ್ರದಲ್ಲಿ ಲಾಕ್‌ಡೌನ್, ಸೀಲ್‌ಡೌನ್ ಗಮನಿಸಿದ್ದೇವೆ. ಈ ಎಲ್ಲ ವಿಚಾರಗಳ ಬಗ್ಗೆ ನಾಳೆ ಮುಖ್ಯಮಂತ್ರಿಗಳ ಜತೆ ಕೂಲಂಕುಷವಾಗಿ ಚರ್ಚೆ ನಡೆಸುತ್ತೇವೆ ಎಂದರು.
ನಾಲ್ಕು ವಾರಗಳಿಂದ ರಾಜ್ಯದಲ್ಲಿ ೩೦೦ ಸೋಂಕು ಪ್ರಕರಣಗಳು ಬರುತ್ತಿತ್ತು. ಈಗ ಈ ಸಂಖ್ಯೆ ೩ ಸಾವಿರದ ಆಸುಪಾಸಿಗೆ ಬಂದು ನಿಂತಿದೆ.
ಈಗ ತೆಗೆದುಕೊಂಡಿರುವ ಕ್ರಮ ಏನೇನೂ ಸಾಲದು. ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮ, ಬೆಂಗಳೂರಿಗೆ ಬರುವವರ ಬಗ್ಗೆ ತೀವ್ರ ನಿಗಾ ವಹಿಸಬೇಕಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತಂದು ಕಠಿಣ ಕ್ರಮ ಜಾರಿಗೊಳಿಸಲಾಗುವುದು ಎಂದರು.
ಕೊರೊನಾ ಸೋಂಕಿನ ೨ನೇ ಅಲೆ ಹಿನ್ನೆಲೆಯಲ್ಲಿ ಮುಂದಿನ ೭ ರಿಂದ ೮ ವಾರಗಳ ಅಗತ್ಯ ಕ್ರಮ ಕೈಗೊಳ್ಳಬೇಕು. ತಾಂತ್ರಿಕ ಸಲಹಾ ಸಮಿತಿ ಬಗ್ಗೆ ವರದಿ ನೀಡಿದೆ. ಗಡಿ ಬಂದ್ ಮಾಡಬಾರದು ಎಂಬ ಬಗ್ಗೆ ಕೇಂದ್ರ ಸರ್ಕಾರದ ಸ್ಪಷ್ಟ ಸೂಚನೆ ಇದೆ. ಆದರೆ, ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.