ಪರೀಕ್ಷೆ ಇಲ್ಲದೆ ಪಾಸಿಟಿವ್ ವರದಿ-ಅತಂಕ

ಕೋಲಾರ,ಮೇ.೩: ಆರೋಗ್ಯ ಇಲಾಖೆಯವರು ಮಾಡಿರುವ ಎಡವಟ್ಟಿನಿಂದ, ಕೊರೊನಾ ಟೆಸ್ಟ್ ಮಾಡದೆಯೇ ಪಾಸಿಟೀವ್ ಎಂದು ವರದಿ ನೀಡಿದ್ದು, ಇದೀಗ ಅನುಮಾನಕ್ಕೆ ಕಾರಣವಾಗಿದೆ.
ಕೊರೊನಾ ಪರೀಕ್ಷೆ ನಡೆಸದೆ ಪಾಸಿಟೀವ್ ಎಂದು ಆರೋಗ್ಯ ಇಲಾಖೆ ವರದಿ ನೀಡಿದ್ದು, ಇದರಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿರುವ ಘಟನೆ ಕೋಲಾರದಲ್ಲಿ ಜರುಗಿದೆ. ಕೋಲಾರ ತಾಲೂಕಿನ ವಕ್ಕಲೇರಿ ಗ್ರಾಮಪಂಚಾಯ್ತಿ ವ್ಯಾಪ್ತಿಗೆ ಸೇರಿದ ಕೂತಾಂಡಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಕೊರೊನಾ ಪರೀಕ್ಷೆ ನಡೆಸದೆ ಪಾಸಿಟೀವ್ ಎಂದು ವರದಿ ನೀಡಲಾಗಿದೆ. ಕೂತಾಂಡಹಳ್ಳಿ ಗ್ರಾಮದ ಯಲ್ಲಪ್ಪ, ಮಂಜುಳ ಹಾಗೂ ಮುರಳಿ ಎಂಬುವರ ಕುಟುಂಬಸ್ಥರು ಆರೋಗ್ಯವಾಗಿದ್ದು, ಇದುವರೆಗೂ ಯಾವುದೇ ಕೊರೊನಾ ಟೆಸ್ಟ್ ಮಾಡಿಸಿರಲಿಲ್ಲ. ಹೀಗಿದ್ದರು ಸಹ ಇಂದು ಮನೆ ಬಳಿ ಬಂದಿದ್ದ, ವಕ್ಕಲೇರಿ ಗ್ರಾಮಪಂಚಾಯ್ತಿ ಸಿಬ್ಬಂದಿ, ನಿಮಗೆ ಕೊರೊನಾ ಪಾಸಿಟೀವ್ ಬಂದಿದೆ ಎಂದು ತಿಳಿಸಿದ್ದಾರೆ. ಇದ್ರಿಂದ ಶಾಕ್ ಆಗುವುದರೊಂದಿಗೆ ಆತಂಕಕ್ಕೊಳಗಾದ ಕುಟುಂಬಸ್ಥರು, ನಾವು ಕೊರೊನಾ ಪರೀಕ್ಷೆಯೇ ಮಾಡಿಸಿಲ್ಲ, ಹೇಗೆ ಪಾಸಿಟೀವ್ ಬರುತ್ತದೆ ಎಂದು ಪ್ರಶ್ನಿಸುವುದರೊಂದಿಗೆ, ಮನೆ ಬಳಿ ಬಂದಂತಹ ಗ್ರಾಮಪಂಚಾಯ್ತಿ ಸಿಬ್ಬಂದಿಯವರನ್ನ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ, ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇನ್ನು ಸಂಬಂದಪಟ್ಟವರಿಗೆ ದೂರವಾಣಿ ಕರೆ ಮಾಡಿ ತರಾಟೆಗೆ ತೆಗೆದುಕೊಂಡ ಕುಟುಂಬಸ್ಥರು, ವೈದ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಆರೋಗ್ಯ ಇಲಾಖೆ ಹಾಗೂ ಪಂಚಾಯ್ತಿಯವರ ಬೇಜವಾಬ್ದಾರಿಯಿಂದಾಗಿ ಮಕ್ಕಳು, ಮಹಿಳೆಯರು ಸೇರಿದಂತೆ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದಾರೆ. ಅಲ್ಲದೆ ಆರೋಗ್ಯ ಇಲಾಖೆ ಮೇಲೆ ಗ್ರಾಮಸ್ಥರಿಗೆ ಅನುಮಾನ ಮೂಡಿದ್ದು, ಕೊರೊನಾ ಹೆಸರಿನಲ್ಲಿ ಗೋಲ್ ಮಾಲ್ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಮೂಡಿದೆ.