ಬೀದರ, ಏ. 08: ಎ 6 ರಂದು ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಕಲಿಗೆ ಸಹಕರಿಸಿ ಅಕ್ರಮ ಎಸಗಿದ ಆರೋಪದಡಿ 16 ಜನ ಶಿಕ್ಷಕರಿಗೆ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ.
ಮಾರ್ಚ 31 ರಿಂದ ನಡೆಯುತ್ತಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅಕ್ರಮ ನಡೆಯುತ್ತಿರುವುದಾಗಿ ಸಾರ್ವಜನಿಕರಿಂದ ದೂರಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಏಪ್ರೀಲ್ 6 ರಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಅವರು ಭಾಲ್ಕಿ ತಾಲೂಕು ಕೇಂದ್ರದಲ್ಲಿರುವ ಶಿವಾಜಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ದಿಡೀರ್ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರದ ಕೊಠಡಿಯಲ್ಲಿ ಮೇಲ್ವಿಚಾರಕರು ಪರೀಕ್ಷೆ ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳ ಉತ್ತರಗಳನ್ನು ಪರೀಕ್ಷೆ ಬರಯುತ್ತಿರುವ ಅಭ್ಯರ್ಥಿಗಳಿಗೆ ನೀಡುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಶಿವಾಜಿ ಪ್ರೌಢ ಶಾಲೆ ಭಾಲ್ಕಿಯ ಸಿಬ್ಬಂದಿಯನ್ನು ವಿಚಾರಿಸಿದಾಗ ಮೊದಲಿನಿಂದಲೂ ಈ ರೀತಿಯಾಗಿ ಪರೀಕ್ಷೆಗಳಲ್ಲಿ ನಡೆಯುತ್ತಿದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಪರೀಕ್ಷಾ ಅಕ್ರಮಗಳಿಗೆ ಉತ್ತೇಜನ ನೀಡುತ್ತಿರುವ ಪರೀಕ್ಷಾ ಕೇಂದ್ರದ ಸಂಬಂಧಪಟ್ಟ ಸಿಬ್ಬಂದಿಗಳ ಪಟ್ಟಿ ಹಾಗೂ ಪ್ರಶ್ನೆ ಪತ್ರಿಕೆಯ ಉತ್ತರ ತಯಾರಿಸಿ ನೀಡುತ್ತಿರುವ ಪ್ರತಿಗಳನ್ನು ಲಗತ್ತಿಸಿ ಸಂಬಂಧಪಟ್ಟ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಶಿಸ್ತು ಪ್ರಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪರೀಕ್ಷಾ ನಿಯಮಗಳನ್ನು ಪಾಲಿಸದೇ ಪರೀಕ್ಷಾ ಪಾವಿತ್ರತೆಯನ್ನು ಕಾಪಾಡದೆ ಕರ್ತವ್ಯಲೋಪ ಎಸಗಿದ ಹಾಗೂ ಬೇಜವಾಬ್ದಾರಿಯಿಂದ ವರ್ತಿಸಿದ ಭಾಲ್ಕಿಯ ವಿವಿಧ ಸರ್ಕಾರಿ ಶಾಲೆಯ ಶಿಕ್ಷಕರಾದ ಬಾಲಾಜಿ ಕಾಂಬಳೆ ಸಹ ಶಿಕ್ಷಕ ಸರ್ಕಾರಿ ಪ್ರೌಢ ಶಾಲೆ ದಾಡಗಿ, ಶೇಷಪ್ಪಾ ಸಹ ಶಿಕ್ಷಕ ಸರ್ಕಾರಿ ಪ್ರೌಢ ಶಾಲೆ ಮೇಹಕರ, ಸಂಪತ ಸಹ ಶಿಕ್ಷಕ ಸರ್ಕಾರಿ ಪ್ರೌಢ ಶಾಲೆ ಲಾಧಾ, ಗೋವಿಂದ ಸಹ ಶಿಕ್ಷಕ ಸರ್ಕಾರಿ ಪ್ರೌಢ ಶಾಲೆ, ಲಾಧಾ, ಕುಪೇಂದ್ರ ಸಹ ಶಿಕ್ಷಕ ಸರ್ಕಾರಿ ಪ್ರೌಢ ಶಾಲೆ ಕಲವಾಡಿ, ಶಿವಾಜಿ ಸಹ ಶಿಕ್ಷಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಾವದಗಿ, ಮಾರುತಿ ರಾಠೋಡ ಸಹ ಶಿಕ್ಷಕ ಸರ್ಕಾರಿ ಪ್ರೌಢ ಶಾಲೆ ಕಾಕನಾಳ, ಶಿವಕುಮಾರ ಬಿರಾದಾರ ಸಹ ಶಿಕ್ಷಕ ಸರ್ಕಾರಿ ಪ್ರೌಢ ಶಾಲೆ ಮಾಸಿಮಾಡ, ಭೀಮರಾವ ಸಹ ಸಹ ಶಿಕ್ಷಕ ಸರ್ಕಾರಿ ಪ್ರೌಢ ಶಾಲೆ ಸಾಯಗಾಂವ ಅವರನ್ನು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ 1957ರ ನಿಯಮ 10(1)(ಡಿ) ಅಡಿಯಲ್ಲಿ ವಿಚಾರಣೆಯನ್ನು ಕಾಯ್ದಿರಿಸಿ ಸೇವೆಯಿಂದ ಅಮಾನತ್ತುಗೊಳಿಸಿ ಶಾಲಾ ಶಿಕ್ಷಣ ಇಲಾಖೆ (ಆಡಳಿತ) ಉಪನಿರ್ದೇಶಕರು ಹಾಗೂ ಶಿಸ್ತು ಪ್ರಾಧಿಕಾರಿಗಳಾದ ಸಲೀಂ ಪಾಷಾ ಅದೇಶ ಹೊರಡಿಸಿದ್ದಾರೆ.
ಇದೇ ರೀತಿ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದ ಖಾಸಗಿ ಅನುಧಾನಿತ ಶಾಲೆಯ ಶಿಕ್ಷರುಗಳಾದ ಭಾಲ್ಕಿಯ ಶಿವಾಜಿ ಪ್ರೌಢ ಶಾಲೆಯ ಶಿಕ್ಷಕರಾದ ದಿನೇಶ ಧಮಕೆ, ಉತ್ತಮ ಬಿರಾದಾರ, ಭಾಲ್ಕಿ ತಾಲೂಕಿನ ಮದಕಟ್ಟಿಯ ಬುದ್ಧಪ್ರೀಯ ಪ್ರೌಢ ಶಾಲೆಯ ಶೇಷಪ್ಪಾ, ಅಡವೆಪ್ಪಾ.ಎಲ್, ಕಮಲಾಕರ ಪಿ., ದತ್ತಾತ್ರಿ ಎಸ್., ಹಾಗೂ ಭಾಲ್ಕಿಯ ರಾಜೀವಗಾಂಧಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಅನೀಲಕುಮಾರ ಗಾಯಕವಾಡ ಇವರನ್ನು ತಕ್ಷಣದಿಂದ ಅಮಾನತ್ತಿನಲ್ಲಿಟ್ಟು ಶಿಸ್ತು ಕ್ರಮ ಜರುಗಿಸಿ ವರದಿ ನೀಡಲು ಈ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆ ಸೂಚಿಸಿದ್ದಾರೆ ಕ್ರಮ ಕೈಗೊಳ್ಳಲು ವಿಫಲವಾದಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆ 1983 ಸೇಕ್ಷನ 39 ರನ್ಷಯ ಕ್ರಮ ಜರುಗಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.