ಪರೀಕ್ಷೆಯಲ್ಲಿ ಉತ್ತಮ ಸಾಧನೆ : ಸನ್ಮಾನ


ಬಾಗಲಕೋಟೆ:ಏ.20 : ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಮೆಟ್ರಿಕ್ ನಂತರದ ವಸತಿ ನಿಲಯಗಳ ಪೈಕಿ ಉತ್ತಮ ಅಂಕ ಪಡೆದು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಜಿ.ಪಂ ಸಿಇಓ ಶಶಿಧರ ಕುರೇರ್ ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದರು.
ಜಿಲ್ಲೆಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪೈಕಿ ವಿಜ್ಞಾನ ವಿಭಾಗದಲ್ಲಿ ಪ್ರವೀಣ ಕೋಲಕಾರ ಶೇ.98.33 ರಷ್ಟು ಅಂಕÀ ಪಡೆಯುವ ಮೂಲಕ ಪ್ರಥಮ ಸ್ಥಾನ ಪಡೆದರೆ, ಮಹೇಶ ಲಮಾಣಿ ಮತ್ತು ವಿಜಯ ಮಹಾಂತೇಶ ಮದ್ದಾನಿಮಠ ಶೇ.97.83 ರಷ್ಟು ಅಂಕ ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕಲಾವಿಭಾಗದಲ್ಲಿ ಐಶ್ವರ್ಯ ಕೌಜಲಗಿ ಶೇ.97.66 ರಷ್ಟು ಅಂಕ ಪಡೆಯುವ ಮೂಲಕ ತೃತೀಯ ಸ್ಥಾನ ಪಡೆದುಕೊಂಡು ಉತ್ತಮ ಸಾಧನೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ ಸಿಇಓ ಶಶಿಧರ ಕುರೇರ ಅವರು ವಸತಿ ನಿಲಯದಲ್ಲಿ ಇದ್ದುಕೊಂಡು ಹೆಚ್ಚಿನ ಅಂಕ ಪಡೆದಿರುವುದು ಅತ್ಯುತ್ತಮ ಸಾಧನೆಯಾಗಿದ್ದು, ಮುಂದಿನ ಜೀವನದಲ್ಲಿ ಇನ್ನು ಹೆಚ್ಚಿನ ಯಶಸ್ಸು ಕಾಣಲೆಂದು ಹಾರೈಸಿದರು. ಅಲ್ಲದೇ ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಯಲ್ಲಿ ವಸತಿ ನಿಲಯಗಳ ಒಟ್ಟು ಫಲಿತಾಂಶ ಶೇ.92.87 ರಷ್ಟು ಆಗಿರುವದನ್ನು ತಿಳಿದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಹರ್ಷ ಎಸ್, ಪತ್ರಾಂಕಿತ ವ್ಯವಸ್ಥಾಪಕ ಶಿವು ದರಗಾದ, ನಿಲಯ ಮೇಲ್ವಿಚಾರಕರಾದ ಆನಂದಕುಮಾರ ಪಾಟೀಲ, ಯಮನವ್ವ ಚಕ್ಕಪ್ಪನವರ, ಅಕ್ಕಾತಾಯಿ ರಬಕವಿ ಸೇರಿದಂತೆ ವಿದ್ಯಾರ್ಥಿಗಳ ಪಾಲಕ ಪೋಷಕರು ಇದ್ದರು.