ಪರೀಕ್ಷೆ,ಪತ್ತೆ ,ಚಿಕಿತ್ಸೆ ತ್ರಿ ಸೂತ್ರಕ್ಕೆ ಆದ್ಯತೆ: ಹೊಸ ಮಾರ್ಗಸೂಚಿ ಬಿಡುಗಡೆ

ನವದಹಲಿ,ಮಾ.೨೩- ಕೋವಿಡ್ -೧೯ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪರೀಕ್ಷೆ, ಪತ್ತೆ, ಚಿಕಿತ್ಸೆಯ ತ್ರಿಸೂತ್ರಕ್ಕೆ ಹೆಚ್ಚಿನ ಒತ್ತು ನೀಡಿ, ಕಟ್ಟುನಿಟ್ಟಾಗಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಜಾರಿ ಮಾಡಬೇಕು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ದೇಶದ ಹಲವು ರಾಜ್ಯಗಳಲ್ಲಿ ಕೋವಿಡ್ ಸೋಂಕು ಪ್ರಮಾಣ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಏಪ್ರಿಲ್ ೧ರಿಂದ ೩೦ರವರೆಗೆ ಇದು ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.

ಹೊಸ ಮಾರ್ಗಸೂಚಿಯಲ್ಲಿ ಕೋವಿಡ್ -೧೯ ನಿಯಂತ್ರಣ ಮಾಡುವ ಉದ್ದೇಶದಿಂದ ಪರೀಕ್ಷೆ ಪ್ರಮಾಣ ಹೆಚ್ಚಳ ಮಾಡಬೇಕು. ಲಸಿಕೆ ನೀಡಿಕೆಗೆ ಅಗತ್ಯ ಕ್ರಮಕೈಗೊಳ್ಳುವಂತೆಯೂ ಸೂಚಿಸಲಾಗಿದೆ.

ಕಂಟೈನ್‌ಮೆಂಟ್ ವಲಯ ಹೊರತುಪಡಿಸಿ, ಎಲ್ಲ ಕಡೆ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಅಂತರ್ ರಾಜ್ಯ ನಿರ್ಬಂಧಕ್ಕೂ ಯಾವುದೇ ಮಿತಿ ಹೇರಿಲ್ಲ. ವಿಮಾನ, ರೈಲು, ವಾಹನ ಸಂಚಾರವೂ ಸುಗಮವಾಗಿ ನಡೆಯಲಿದೆ. ಆದರೆ ಸೋಂಕು ನಿಯಂತ್ರಣಕ್ಕೆ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಆರ್‌ಟಿಪಿಸಿಆರ್ ಪರೀಕ್ಷಾ ಪ್ರಮಾಣ ಕಡಿಮೆ ಇದ್ದು, ಮುಂದಿನ ದಿನಗಳಲ್ಲಿ ಅದನ್ನು ಹೆಚ್ಚಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಕಡ್ಡಾಯವಾಗಿ ಮಾಸ್ಕ್‌ಧಾರಣೆ, ಶುಚಿತ್ವಕ್ಕೆ ಆದ್ಯತೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೋಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಇದರ ಜೊತೆಗೆ ಕೋವಿಡ್ ಸೂಕ್ತ ವರ್ತನೆ ನಿಯಮಗಳನ್ನು ಪಾಲಿಸಬೇಕು. ಆ ಮೂಲಕ ಸೋಂಕು ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದೆ.

ಮೆಟ್ರೋ ರೈಲುಗಳು, ಶಾಲೆ, ಉನ್ನತ ಶಿಕ್ಷಣ ಸಂಸ್ಥೆಗಳು , ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಶಾಪಿಂಗ್ ಮಾಲ್, ಮಲ್ಟಿಫ್ಲೆಕ್ಸ್, ಯೋಗ ಕೇಂದ್ರಗಳು, ಜಿಮ್, ಪ್ರದರ್ಶನ ಕೇಂದ್ರಗಳಿಗೆ ಅನುಮತಿಯನ್ನು ಮುಂದುವರಿಸಲಾಗಿದೆ.

ವಿಶ್ವದಲ್ಲಿ ಅತಿ ದೊಡ್ಡ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದ್ದು, ಅದನ್ನು ರಾಜ್ಯ ಮತ್ತು ಕೇಂದ್ರಾಡಳಿತ ಸರ್ಕಾರಗಳು ಅರ್ಹರಿಗೆ ಲಸಿಕೆ ಹಾಕಲು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದೆ.