
ಸಂಜೆವಾಣಿ ವಾರ್ತೆ
ಸಿರಿಗೇರಿ ಮಾ8. ಈಗ ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗುತ್ತಿದ್ದು, ವಿದ್ಯಾರ್ಥಿಗಳು ಆತಂಕಪಡದೇ ಪರೀಕ್ಷೆಗಳನ್ನು ಬರೆಯಿರಿ. ಪರೀಕ್ಷೆಯ ಭಯ ಬೇಡವೆಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಕೆ.ವೀರಪ್ಪ ತಿಳಿಸಿದರು. ಗ್ರಾಮದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಾ.7 ಮಂಗಳವಾರ ಸರಸ್ವತಿ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಹೈಸ್ಕೂಲ್ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳು ಸಾಂಗೋಪಾಂಗವಾಗಿ ನಡೆಯಲಿ ಎಂದು ಪೂಜೆ ಆಚರಿಸುತ್ತಿದ್ದೀರಿ, ನಿಮ್ಮ ಪ್ರಯತ್ನ ಸರಿಯಾಗಿದ್ದರೆ, ದೇವರ, ದೊಡ್ಡವರ ಆಶೀರ್ವಾದ ನಿಮ್ಮ ಜೊತೆಗಿರುತ್ತದೆ. ಪರೀಕ್ಷೆಗಳನ್ನು ಭಯದಿಂದ ಎದುರಿಸಬೇಡಿ, ದಿನಾಲು ಶಾಲೆಗೆ ಬಂದು ಪಾಠದ ತರಗತಿಗಳಲ್ಲಿ ಭಾಗವಹಿಸುವಂತೆ ಸಹಜವಾಗಿ ಪರೀಕ್ಷೆಗಳ ತರಗತಿಗಳಲ್ಲಿ ಪಾಲ್ಗೊಳ್ಳಿ, ಸಮಾಧಾನವಾಗಿ ಪ್ರಶ್ನೆಗಳಿಗೆ ಉತ್ತರ ಬರೆಯಿರೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸಹಶಿಕ್ಷಕರೂ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭಕೋರಿ ಧೈರ್ಯದಿಂದ ಪರೀಕ್ಷೆಗಳನ್ನು ಬರೆಯಿರಿ ಎಂದರು. ನಂತರ ಎಸ್‍ಡಿಎಂಸಿ ಅಧ್ಯಕ್ಷ ವಿ.ಹುಲುಗಪ್ಪ ಮಾತನಾಡಿ ನೀವು ಓದುವಾಗ ಸರಿಯಾಗಿ ಓದಿದರೆ ಮುಂದೆ ದೊಡ್ಡ ವ್ಯಕ್ತಿಗಳಾಗುತ್ತೀರಿ, ಮೊಬೈಲ್, ಟಿ.ವಿ ನೋಡುವುದು, ಊರುಗಳಿಗೆ ತಿರುಗಾಡುವುದು, ಆಟಗಳನ್ನು ಆಡುವುದು ಕಡಿಮೆ ಮಾಡಿ ಪರೀಕ್ಷೆಗಳು ಮುಗಿಯುವವರೆಗೆ ಶ್ರದ್ಧೆಯಿಂದ ಓದಿ 10ನೇ ತರಗತಿ ವಿದ್ಯಾರ್ಥಿಗಳು ಎಲ್ಲರೂ ಪಾಸಾಗಿ ನಮ್ಮ ಶಾಲೆಗೆ ಕೀರ್ತಿ ತರಬೇಕೆಂದು ತಿಳಿಸಿದರು. ಸಹ ಶಿಕ್ಷಕರಾದ ಜ್ಯೋತಿ.ಪಿ.ಎನ್. ಅನ್ನಿವೇಲು, ವಿಶಾಲಮ್ಮ.ಎನ್. ರಾಮಾಂಜಿನಿ, ಮೊಹಮ್ಮದ್‍ಖಾಸಿಂ, ವೆಂಕಟೇಶ್, ಎಸ್‍ಡಿಎ ಕೆ.ಲಕ್ಷ್ಮಿದೇವಿ, ಅತಿಥಿ ಶಿಕ್ಷಕಿ ಕುಮಾರಿ ಜಯಮ್ಮ, ಹಾಗೂ 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಪುಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.