ಪರೀಕ್ಷಾ ಹಗರಣ ಆರೋಪಿ ಆರ್.ಡಿ. ಪಾಟೀಲ್ ಮನೆ, ಅಪಾರ್ಟ್‍ಮೆಂಟ್‍ಗೆ ಕರೆದೊಯ್ದು ಸ್ಥಳ ಮಹಜರು

ಕಲಬುರಗಿ,ನ.11: ಕಳೆದ ಶುಕ್ರವಾರ ಮಹಾರಾಷ್ಟ್ರದಲ್ಲಿ ಸೆರೆ ಸಿಕ್ಕ ಕರ್ನಾಟಕ ಲೋಕಸೇವಾ ಆಯೋಗದ ವಿವಿಧ ನಿಗಮ ಮಂಡಳಿಗಳ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣಗಳ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್‍ನಿಗೆ ಇಡೀ ರಾತ್ರಿ ಅಶೋಕ್ ಪೋಲಿಸ್ ಠಾಣೆಯಲ್ಲಿ ವಿಚಾರಣೆ ಮಾಡಿದ ಪೋಲಿಸರು, ಶನಿವಾರದಂದು ಆತನ ಮನೆ, ಅಪಾರ್ಟ್‍ಮೆಂಟ್ ಸೇರಿ ವಿವಿಧ ಸ್ಥಳಗಳಿಗೆ ಕರೆದೊಯ್ದು ಸ್ಥಳಗಳಲ್ಲಿ ಪೋಲಿಸರು ಮಹಜರು ಮಾಡಿದರು.
ತಡರಾತ್ರಿ ಬಂಧಿಸಿ ಅಶೋಕ್ ನಗರ ಪೋಲಿಸ್ ಠಾಣೆಗೆ ಕರೆತಂದಿದ್ದರಿಂದ ಆತನಿಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಆಗಲಿಲ್ಲ. ಅಲ್ಲದೇ ಶನಿವಾರ ಬೆಳಿಗ್ಗೆಯೇ ಆತನಿಗೆ ಪೋಲಿಸರು ಆತನ ಮನೆ, ಅಪಾರ್ಟ್‍ಮೆಂಟ್ ಸೇರಿ ವಿವಿಧ ಸ್ಥಳಗಳಿಗೆ ಕರೆದೊಯ್ದು ಮಹಜರು ಮಾಡಿದರು. ಮತ್ತೆ ಸಂಜೆ ಅಶೋಕ್ ನಗರ ಪೋಲಿಸ್ ಠಾಣೆಗೆ ಕರೆತಂದಿದ್ದು, ರಾತ್ರಿ ನ್ಯಾಯಾಲಯದ ಮುಂದೆ ಒಪ್ಪಿಸಿ, ಮತ್ತೆ ಪೋಲಿಸ್ ವಶಕ್ಕೆ ಪಡೆಯುವ ಸಾಧ್ಯತೆ ಹೆಚ್ಚಿದೆ. ಬಂಧಿತ ಆರೋಪಿಯನ್ನು 24 ಗಂಟೆಯೊಳಗಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಾಗಿದ್ದು, ಆ ನಿಟ್ಟಿನಲ್ಲಿ ಪೋಲಿಸರು ಕ್ರಮ ಕೈಗೊಂಡಿದ್ದಾರೆ.
ಪ್ರಕರಣದ ಕುರಿತು ನಗರ ಪೋಲಿಸ್ ಆಯುಕ್ತ ಆರ್. ಚೇತನಕುಮಾರ್ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 28ರಂದು ನಗರದ ಶ್ರೀ ಶರಣಬಸವೇಶ್ವರ್ ಮಹಾವಿದ್ಯಾಲಯ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಜರುಗಿದ ಕರ್ನಾಟಕ ಲೋಕಸೇವಾ ಆಯೋಗದ ಎಫ್‍ಡಿಎ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ಎಸಗುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಪೋಲಿಸರು ಕಾರ್ಯಾಚರಣೆ ಮಾಡಿ ಐವರು ಆರೋಪಿಗಳನ್ನು ಬಂಧಿಸಿದರು. ಆ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿ, ಮತ್ತೆ ಅವರಿಗೆ ಪೋಲಿಸ್ ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಲಾಗುತ್ತಿದೆ ಎಂದರು.
ಬಂಧಿತರ ವಿಚಾರಣೆಯ ಮೇಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್ ವಿರುದ್ಧ ಗುಲಬರ್ಗಾ ವಿಶ್ವವಿದ್ಯಾಲಯ ಹಾಗೂ ಅಶೋಕ್ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ ಅನೇಕ ದಿನಗಳಿಂದ ತಲೆಮರೆಸಿಕೊಂಡಿದ್ದ. ಆತನ ಪತ್ತೆಗಾಗಿ ವಿಶೇಷ ಪೋಲಿಸ್ ತಂಡಗಳನ್ನು ರಚಿಸಲಾಗಿತ್ತು. ಎಸಿಪಿ ಭೂತೇಗೌಡ ವಿ.ಎಸ್. ನೇತೃತ್ವದ ತಂಡವು ಶುಕ್ರವಾರ ಮಧ್ಯಾಹ್ನ ಖಚಿತ ಭಾತ್ಮಿ ಮೇರೆಗೆ ಆರೋಪಿಯನ್ನು ಬಂಧಿಸಿಕೊಂಡು ನಗರಕ್ಕೆ ಕರೆದುಕೊಂಡು ಬಂದಿದೆ. ಆತನಿಗೆ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮತ್ತೆ ಪೋಲಿಸ್ ವಶಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.
ಆರೋಪಿ ಆರ್.ಡಿ. ಪಾಟೀಲ್‍ನಿಗೆ ಮೊಬೈಲ್ ಸಂಪರ್ಕದ ಮೂಲಕ ಅಡಗಿರುವ ಮಾಹಿತಿ ಖಚಿತಪಟ್ಟಿದ್ದರಿಂದ ಆತನಿಗೆ ಪೋಲಿಸರು ಹೋಗಿ ತಮ್ಮ ವಶಕ್ಕೆ ತೆಗೆದುಕೊಂಡು ಬಂದಿದ್ದಾರೆ. ಪ್ರಕರಣದಲ್ಲಿ ಒಟ್ಟು ಆರು ಜನರನ್ನು ಬಂಧಿಸಲಾಗಿದೆ. ಇನ್ನು ಆತನಿಗೆ ಆಶ್ರಯ ಕೊಟ್ಟವರಿಗೂ ಸಹ ಆರೋಪಿಗಳೆಂದು ಪರಿಗಣಿಸಲಾಗುವುದು ಎಂದು ಅವರು ತಿಳಿಸಿದರು.
ಆರ್.ಡಿ. ಪಾಟೀಲ್‍ನ ಅಕ್ರಮದ ಕುರಿತು ಸಮಗ್ರ ಮಾಹಿತಿ ಸದ್ಯಕ್ಕೆ ಕೊಡುವುದು ಆಗಲಾರದು. ಆತನಿಗೆ ಸಂಪೂರ್ಣವಾಗಿ ವಿಚಾರಣೆ ಒಳಪಡಿಸಿದ ನಂತರವೇ ಖಚಿತವಾಗಿ ಗೊತ್ತಾಗಲಿದೆ ಎಂದು ಹೇಳಿದ ಅವರು, ಅಫಜಲಪುರ ವ್ಯಾಪ್ತಿಯಲ್ಲಿಯೂ ಸಹ ಪರೀಕ್ಷಾ ಅಕ್ರಮ ಆಗಿದ್ದು, ಆ ಕುರಿತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಮಾಹಿತಿ ನೀಡುವರು ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.