
ಕಲಬುರಗಿ,ಸೆ.17:ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ನಿವಾರಿಸಲು ಪೂರಕವಾಗಿ ಕ್ರಮಬದ್ಧ ಅಧ್ಯಯನ ಹಾಗೂ ಶಿಸ್ತುಬದ್ಧ ಪರೀಕ್ಷಾ ಸಿದ್ಧತೆ ಕುರಿತು ಖ್ಯಾತ ಮನೋವೈದ್ಯರು ಹಾಗೂ ವ್ಯಕ್ತಿತ್ವ ವಿಕಸನ ತಜ್ಞರಾದ ಡಾ.ಸಿ.ಆರ್.ಚಂದ್ರಶೇಖರ ಅವರಿಂದ ನಮ್ಮ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ ‘ಪರೀಕ್ಷಾ ಸಂಭ್ರಮ’ ಉಪನ್ಯಾಸ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಇಂದು (ಸೆಪ್ಟೆಂಬರ್ 17) ಬೆಳಗ್ಗೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಹಿರಿಯ ಮುತ್ಸದ್ಧಿಗಳಾದ ಡಾ.ಸಿ.ಆರ್.ಚಂದ್ರಶೇಖರ ಅವರು ಮಾತನಾಡುತ್ತಾ, ವಿಷಯ ಗ್ರಹಿಕೆ ಹಾಗೂ ಓದಿದ್ದನ್ನು ಮೇಲಿಂದ ಮೇಲೆ ಸ್ಮರಿಸಿಕೊಳ್ಳುವ ತಂತ್ರವನ್ನು ಅಳವಡಿಸಿಕೊಳ್ಳುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ಒಂದೆರಡು ಬಾರಿ ಓದಿದ್ದನ್ನು ಪದೇಪದೆ ಬರೆಯುವುದರಿಂದ ವಿಷಯವು ಮೆದುಳಿನಲ್ಲಿ ದಾಖಲಾಗುತ್ತದೆ ಎಂದು ಆಪ್ತ ಸಲಹೆ ನೀಡಿದರು.
ತರಗತಿಯಲ್ಲಿ ಪಠ್ಯವನ್ನು ಆಲಿಸುವಾಗ ಏಕಾಗ್ರತೆ ಇರಬೇಕು. ಅಂದಾಗ ಮಾತ್ರ ನಮ್ಮ ಮೆದುಳು ಸಮರ್ಥವಾಗಿ ವಿಷಯ ಸಂಗ್ರಹ ಮಾಡಿಕೊಳ್ಳುತ್ತದೆ. ಯಾವುದೇ ವಿಷಯ (ಸಬ್ಜೆಕ್ಟ್) ಸುಲಭವೂ ಅಲ್ಲ; ಕಷ್ಟವೂ ಅಲ್ಲ. ಅದೇನಿದ್ದರೂ ಆ ವಿಷಯದ ಕುರಿತು ನಾವು ತೋರುವ ಆಸಕ್ತಿ ಮತ್ತು ಅನಾಸಕ್ತಿಯ ಮೇಲೆ ನಿಂತಿರುತ್ತದೆ. ಬಹುಮುಖ್ಯವಾಗಿ, ವಿಷಯದ ಕುರಿತು ಭಯ ಹೋಗಲಾಡಿಸಬೇಕಾದರೆ ಆ ವಿಷಯವನ್ನು ಸ್ವಲ್ಪ ಆಸಕ್ತಿಯಿಂದ ಓದುವುದನ್ನು ರೂಢಿಸಿಕೊಳ್ಳಬೇಕು. ಆಗ ನಿಧಾನಕ್ಕೆ ಅದುವರೆಗೆ ಹೆದರಿಕೆಗೆ ಕಾರಣವಾಗಿದ್ದ ವಿಷಯದ ಕುರಿತು ಆಸಕ್ತಿ ಹುಟ್ಟುತ್ತದೆ. ಹೀಗೆ, ಒಂದು ವಿಷಯದ ಕುರಿತು ನಮ್ಮೊಳಗಿನ ಭಯ ನಿವಾರಣೆ ಆಗಬೇಕಾದರೆ ಮೊದಲು ನಾವು ಶಿಸ್ತುಬದ್ಧ ಪೂರ್ವಸಿದ್ಧತೆಗೆ ಆದ್ಯತೆ ನೀಡಬೇಕಾಗುತ್ತದೆ. ಅಂದಾಗ ಮಾತ್ರ ನಮ್ಮೊಳಗೆ ಆತ್ಮವಿಶ್ವಾಸ ವೃದ್ಧಿಸುತ್ತದೆ ಎಂದರು.
ವಿದ್ಯಾರ್ಥಿ ಜೀವನದಲ್ಲಿಯೇ ನಿಖರವಾದ ಗುರಿ ಇಟ್ಟುಕೊಳ್ಳಬೇಕು. ಈ ಗುರಿ ಸಾಧನೆಗೆ ಪೂರಕವಾಗಿ ವೇಗ ಮತ್ತು ಸ್ಫುಟವಾದ ಬರವಣಿಗೆ ರೂಢಿಸಿಕೊಳ್ಳಬೇಕು. ಸಮಯ ನಿರ್ವಹಣೆಯ ಕೌಶಲ ಗೊತ್ತಾದರೆ ಆತ್ಮವಿಶ್ವಾಸ ಪುಟಿದೇಳುತ್ತದೆ ಎಂದು ಕಿವಿಮಾತು ಹೇಳಿದರು.
** ಆತಂಕ ಬೇಡ: ವಿಷಯವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ನಮ್ಮೊಳಗಿನ ಭಯ ತಾನೇ ತಾನಾಗಿ ನಿವಾರಣೆಯಾಗುತ್ತದೆ. ಇದರ ಜೊತೆಗೆ, ಪರೀಕ್ಷೆಯಲ್ಲಿ ಯಾವ ಪ್ರಶ್ನೆಗೆ ಎಷ್ಟು ಉತ್ತರ ಬರೆಯಬೇಕು ಎಂಬುದನ್ನು ಅರಿತದ್ದಾದರೆ ನಿರೀಕ್ಷಿತ ಅಂಕಗಳನ್ನು ಗಳಿಸುವುದು ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಹಳೆಯ ಪ್ರಶ್ನೆ ಪತ್ರಿಕೆಗಳಿಗೆ ಮನೆಯಲ್ಲಿ ಸಮಯ ನಿಗದಿಪಡಿಸಿ ಉತ್ತರಿಸುವುದನ್ನು ರೂಢಿಸಿಕೊಳ್ಳುವುದು ಉತ್ತಮ ಎಂದು ಡಾ.ಚಂದ್ರಶೇಖರ ತಿಳಿಸಿದರು.
ಪಠ್ಯವನ್ನು ಅರ್ಥ ಮಾಡಿಕೊಳ್ಳಲು ವಿದ್ಯಾರ್ಥಿಗಳು ತಮ್ಮೊಳಗೆ ಸಣ್ಣ ಸಣ್ಣ ಗುಂಪುಗಳನ್ನು ಮಾಡಿಕೊಂಡು ಗುಂಪು ಚರ್ಚೆ ನಡೆಸುವುದು ಒಳ್ಳೆಯದು ಎಂದು ಹೇಳಿದರು.
** ಉಸಿರಾಟದ ಲಯ ತಿಳಿದಿರಲಿ: ನಮ್ಮ ಮೆದುಳಿಗೆ ಅಗತ್ಯ ಪ್ರಮಾಣದ ಆಮ್ಲಜನಕ ಪೂರೈಕೆ ಆದಾಗ ಮಾತ್ರ ನಾವು ಚೈತನ್ಯದಿಂದ ಕೂಡಿರಲು ಸಾಧ್ಯವಾಗುತ್ತದೆ. ಹಾಗಾಗಿ, ಮುಂಜಾನೆ ಎದ್ದ ಕೂಡಲೆ ದೀರ್ಘ ಉಸಿರಾಟಕ್ಕಾಗಿ ಪ್ರಾಣಾಯಾಮ ಮಾಡುವುದು ಒಳ್ಳೆಯದು. ಇದರ ಜೊತೆಗೆ, ರಕ್ತದಲ್ಲಿ ಹೀಮೊಗ್ಲೋಬಿನ್ ಪ್ರಮಾಣ ಸಮರ್ಪಕವಾಗಿರುವಂತೆ ಎಚ್ಚರ ವಹಿಸಬೇಕು. ದೇಹದ ಎಲ್ಲ ಭಾಗಗಳಿಗೆ ಅಗತ್ಯ ಪ್ರಮಾಣದ ಆಮ್ಲಜನಕ ಪೂರೈಕೆ ಮಾಡಲು ಹೀಮೊಗ್ಲೋಬಿನ್ ಸಮರ್ಪಕ ಪ್ರಮಾಣದಲ್ಲಿರಬೇಕು. ಹೀಮೊಗ್ಲೋಬಿನ್ ಮತ್ತು ನೆನಪಿನ ಶಕ್ತಿಯ ಮಧ್ಯೆ ನೇರವಾದ ಸಂಬಂಧವಿದೆ ಎಂಬುದನ್ನು ಮರೆಯಬಾರದು ಎಂದು ನುಡಿದರು.
ವಿವೇಕಾನಂದ ವಿದ್ಯಾ ನಿಕೇತನ ಶಾಲೆಯ ಪ್ರಾಂಶುಪಾಲ ಸಿದ್ದಪ್ಪ ಭಗವತಿ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಸುವರ್ಣಾ ಎಸ್.ಭಗವತಿ, ಸಾಮಾಜಿಕ ಚಿಂತಕರು ಹಾಗೂ ಶಿಕ್ಷಣ ತಜ್ಞರಾದ ಎಸ್.ಎಸ್.ಹಿರೇಮಠ, ಶಾಲೆಯ ಶಿಕ್ಷಣ ಸಂಯೋಜಕರಾದ ಸುಮಾ ಎಸ್.ಭಗವತಿ ಹಾಗೂ ಸುμÁ್ಮ ಎಸ್.ಭಗವತಿ ಸೇರಿದಂತೆ ಶಿಕ್ಷಕ-ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
** ಒಂದು ಪ್ರಶ್ನೆಗೆ ಒಂದು ಪುಸ್ತಕ: ‘ಪರೀಕ್ಷಾ ಸಂಭ್ರಮ’ ಉಪನ್ಯಾಸದ ಬಳಿಕ ಡಾ.ಸಿ.ಆರ್.ಚಂದ್ರಶೇಖರ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ, ವಿದ್ಯಾರ್ಥಿಗಳಿಂದ ಕುತೂಹಲ ಕೆರಳಿಸುವ ಪ್ರಶ್ನೆಗಳು ತೂರಿಬಂದವು. ಈ ಮಧ್ಯೆ, ಪ್ರತಿ ವಿದ್ಯಾರ್ಥಿಯ ಪ್ರತಿಯೊಂದು ಪ್ರಶ್ನೆಗೆ ಉತ್ತರಿಸಿದ ಬಳಿಕ ಡಾ.ಚಂದ್ರಶೇಖರ ಅವರು ಬರೆದಿರುವ ‘ಎಂಜಾಯ್ ದ ಎಕ್ಸಾಂ’ ಕೃತಿಯನ್ನು ಬಹುಮಾನವಾಗಿ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಲಾಯಿತು.