ಪರೀಕ್ಷಾ ಕೇಂದ್ರ ವರ್ಗಾವಣೆ: ಸಾರ್ವಜನಿಕರು ನಿಟ್ಟುಸಿರು

ಕೆ.ಆರ್.ಪೇಟೆ.ಏ.30: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷಾ ಕೇಂದ್ರವನ್ನು ಈ ಹಿಂದೆ ನಡೆಸಲಾಗುತ್ತಿದ್ದ ಆಸ್ಪತ್ರೆಯ ಹಿಂಭಾಗಕ್ಕೆ ವರ್ಗಾಯಿಸಿರುವುದಕ್ಕೆ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ ಹತ್ತು ದಿನಗಳಿಂದ ಆಸ್ಪತ್ರೆಯ ಮುಂಭಾಗದ ಕ್ಯಾಂಟೀನ್ ಪಕ್ಕದಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗುತ್ತಿತ್ತು. ಇದರಿಂದಾಗಿ ಆಸ್ಪತ್ರೆಯ ಒಳರೋಗಿಗಳು ಹಾಗೂ ಹೊರ ರೋಗಿಗಳು ಆಸ್ಪತ್ರೆಯ ಸಿಬ್ಬಂಧಿಗಳು ಕಾಫೀ, ಟೀ, ನೀರು, ಬ್ರೆಡ್ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಲು ಬಂದಾಗ ಕೋವಿಡ್ ಲಕ್ಷಣಗಳಿರುವವರು ಕಲ್ಲುಬೆಂಚುಗಳ ಮೇಲೆ, ಕ್ಯಾಂಟಿನ್ ಕುರ್ಚಿಗಳ ಮೇಲೆ ಕುಳಿತುಕೊಳ್ಳುವುದು, ಪೇಪರ್ ಓದುವುದು ಮಾಡುತ್ತಿದ್ದು ಇದರಿಂದಾಗಿ ಆರೋಗ್ಯವಂತರು ಅಲ್ಲಿಗೆ ಬರಲು ಹೆದರುತ್ತಿದ್ದರು.
ಏಕೆಂದರೆ ಸೋಂಕಿನ ಲಕ್ಷಣಗಳು ನಮಗೂ ಆವರಿಸಬಹುದೆಂಬ ಆತಂಕ ಎಲ್ಲರನ್ನು ಕಾಡುತ್ತಿತ್ತು. ಈ ಬಗ್ಗೆ ಆಡಳಿತ ವೈದ್ಯಾಧಿಕಾರಿಗಳ ಗಮನಕ್ಕೆ ತರಲಾಗಿತ್ತು.
ಗುರುವಾರದಿಂದ ಕೋವಿಡ್ ಪರೀಕ್ಷೆಯನ್ನು ಆಸ್ಪತ್ರೆಯ ಹಿಂಭಾಗದಲ್ಲಿರುವ ಮಳಿಗೆಗಳಲ್ಲಿ ಕೋವಿಡ್ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು. ಇಲ್ಲಿಗೆ ವರ್ಗಾಯಿಸಿದ್ದಕ್ಕೆ ಸಾರ್ವಜನಿಕರು ಅಭಿನಂದನೆ ತಿಳಿಸಿದ್ದು ಪರೀಕ್ಷೆಗೆ ಒಳಪಡುವವರು ಬಿಸಿಲಿನ ಝಳಕ್ಕೆ ಹೈರಾಣಾಗುವುದರಿಂದ ಅಲ್ಲಿಗೆ ಈ ಹಿಂದೆ ಶಾಮಿಯಾನ ಹಾಕಿಸಿದಂತೆ ಈಗಲೂ ಶಾಮಿಯಾನ ವ್ಯವಸ್ಥೆ ಕಲ್ಪಿಸಬೇಕಾಗಿ ವಿವಿಧ ಪ್ರಗತಿಪರ ಸಂಘಟನೆಗಳು ಆಗ್ರಹಿಸಿದ್ದಾರೆ.