ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಅಫಜಲಪುರದ ಇಬ್ಬರು ಪ್ರಭಾರಿ ಪ್ರಿನ್ಸಿಪಾಲ್‍ರು ಜೈಲಿಗೆ

ಕಲಬುರಗಿ,ನ.29: ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ನಿಗಮ ಮಂಡಳಿಗಳ ನೇಮಕಾತಿ ಎಫ್‍ಡಿಎ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಅಕ್ರಮ ಪ್ರಕರಣದಲ್ಲಿ ಸಿಐಡಿ ಪೋಲಿಸರು ಬುಧವಾರ ಅಫಜಲಪುರದ ಇಬ್ಬರು ಪ್ರಭಾರಿ ಪ್ರಿನ್ಸಿಪಾಲರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ಅಫಜಲಪುರ ತಾಲ್ಲೂಕಿನ ಕರ್ಜಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹಾಗೂ ಪ್ರಭಾರಿ ಪ್ರಿನ್ಸಿಪಾಲ್ ಚಂದ್ರಕಾಂತ್ ಬುರಕಲ್ ಹಾಗೂ ಅಫಜಲಪುರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮತ್ತು ಪ್ರಭಾರಿ ಪ್ರಿನ್ಸಿಪಾಲ್ ಬಸಣ್ಣ ಪೂಜಾರಿ ಅವರೇ ಬಂಧಿತ ಆರೋಪಿಗಳಾಗಿದ್ದಾರೆ. ಕಳೆದ 15ರಂದು ಇಬ್ಬರು, ಪ್ರಭಾರಿ ಪ್ರಿನ್ಸಿಪಾಲರನ್ನು ಸಿಐಡಿ ಪೋಲಿಸರು ತಮ್ಮ ವಶಕ್ಕೆ ಪಡೆದು ನಗರದ ಹೊಸ ಐವಾನ್ ಶಾಹಿ ಅತಿಥಿ ಗೃಹದ ಆವರಣದಲ್ಲಿರುವ ಸಿಐಡಿ ಕಚೇರಿಗೆ ಕರೆತಂದು ವಿಚಾರಣೆಗೆ ಒಳಪಡಿಸಿ ಮತ್ತೆ ಅಗತ್ಯವಾದಾಗ ಕರೆದಾಗ ಬನ್ನಿ ಎಂದು ಹೇಳಿ ಮರಳಿ ಕಳಿಸಿದ್ದರು. ಅಲ್ಲದೇ ಮರುದಿನ ನವೆಂಬರ್ 16ರಂದು ಸಹ ಮತ್ತೆ ಇಬ್ಬರು ಪ್ರಭಾರಿ ಪ್ರಿನ್ಸಿಪಾಲರನ್ನು ಕರೆಸಿ ವಿಚಾರಣೆ ಮಾಡಿ ಮತ್ತೆ ಬಿಟ್ಟು ಕಳಿಸಿದ್ದರು.
ಚಂದ್ರಕಾಂತ್ ಬುರಕಲ್ ಅವರು ರಾಯಲ್ ಪಬ್ಲಿಕ್ ಶಾಲೆಯ ಕೆಇಎ ಪರೀಕ್ಷಾ ಕೇಂದ್ರದ ಮುಖ್ಯಸ್ಥರಾಗಿದ್ದರು. ಬಸಣ್ಣ ಪೂಜಾರಿಯವರು ಕೆಇಎ ಪರೀಕ್ಷೆಯ ಕಸ್ಟೋಡಿಯನ್ ಆಗಿ ಕಾರ್ಯನಿರ್ವಹಿಸಿದ್ದರು. ಪರೀಕ್ಷೆಯಲ್ಲಿ ಅಧಿಕೃತ ಅಭ್ಯರ್ಥಿಗಳ ಬದಲು ಬೇರೆಯವರಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟ ಆರೋಪವನ್ನು ಸಹ ಚಂದ್ರಕಾಂತ್ ಅವರು ಎದುರಿಸುತ್ತಿದ್ದಾರೆ. ಪರೀಕ್ಷಾ ಅಕ್ರಮಕ್ಕೆ ಸಹಕಾರ ಕೊಡಲು ಪ್ರಶ್ನೆ ಪತ್ರಿಕೆ ಸಹ ಸೋರಿಕೆ ಮಾಡಿದ ಆರೋಪವನ್ನು ಇಬ್ಬರು ಪ್ರಭಾರಿ ಪ್ರಿನ್ಸಿಪಾಲರು ಎದುರಿಸುತ್ತಿದ್ದಾರೆ.
ಬಂಧಿತ ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಸಿಐಡಿ ಅಧಿಕಾರಿಗಳು ಇಬ್ಬರಿಗೂ ತೀವ್ರ ವಿಚಾರಣೆಗೆ ಒಳಪಡಿಸಿದರು. ಅಲ್ಲದೇ ಇಬ್ಬರನ್ನು ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಸಿಐಡಿ ಅಧಿಕಾರಿಗಳು ಹಾಜರುಪಡಿಸಿದರು.
ಈ ಮಧ್ಯೆ, ಎಫ್‍ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಅಫಜಲಪುರ ಪಟ್ಟಣದ ರಾಯಲ್ ಪಬ್ಲಿಕ್ ಶಾಲೆಯಿಂದ ಸೋರಿಕೆಯಾಗಿರುವ ಕುರಿತು ತನಿಖಾಧಿಕಾರಿಗಳಿಗೆ ಮಾಹಿತಿ ದೊರೆಕಿದ್ದು, ಆ ಹಿನ್ನೆಲೆಯಲ್ಲಿ ಇಬ್ಬರು ಪ್ರಿನ್ಸಿಪಾಲರನ್ನು ಸಿಐಡಿ ತನ್ನ ವಶಕ್ಕೆ ತೆಗೆದುಕೊಂಡು ಈ ಮೊದಲು ವಿಚಾರಣೆಗೆ ಒಳಪಡಿಸಿತ್ತು.
ಅಫಜಲಪುರ ಪಟ್ಟಣದಲ್ಲಿನ ಮಹಾಂತೇಶ್ವರ್ ವಿದ್ಯಾವರ್ಧಕ ಸಂಘ, ಶಿವಲಿಂಗೇಶ್ವರ್ ಶಿಕ್ಷಣ ಸಂಸ್ಥೆ ಹಾಗೂ ರಾಯಲ್ ಪಬ್ಲಿಕ್ ಸ್ಕೂಲ್ ಸೇರಿ ಒಟ್ಟು ಮೂರು ಎಫ್‍ಡಿಎ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ರಾಯಲ್ ಪಬ್ಲಿಕ್ ಸ್ಕೂಲ್‍ನಿಂದಲೇ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿರುವ ಕುರಿತು ಬಂಧಿತ ಆರೋಪಿಗಳಿಂದ ದೃಢಪಟ್ಟಿದ್ದರಿಂದ ಸಿಐಡಿ ಪೋಲಿಸರು ರಾಯಲ್ ಪಬ್ಲಿಕ್ ಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ ಮುಖ್ಯ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಭಾರಿ ಪ್ರಿನ್ಸಿಪಾಲ್ ಚಂದ್ರಕಾಂತ್ ಬುರಕಲ್ ಮತ್ತು ಬಸಣ್ಣ ಪೂಜಾರಿ ಅವರಿಗೆ ವಶಕ್ಕೆ ತೆಗೆದುಕೊಂಡಿದ್ದು, ಆ ಕುರಿತು ಅವರಿಗೆ ಹೆಚ್ಚಿನ ವಿಚಾರಣೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮೊದಲು ಸಿಐಡಿ ವಶಕ್ಕೆ ಹೋಗಿ ಬಂದ ಇಬ್ಬರು ಪ್ರಿನ್ಸಿಪಾಲರು ತಾವು ಅಮಾಯಕರು ಎನ್ನುವ ರೀತಿಯಲ್ಲಿ ಹೇಳಿಕೆಗಳನ್ನೂ ಸಹ ಕೊಟ್ಟಿದ್ದರು. ಈಗ ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸುವ ಮೂಲಕ ಪರೀಕ್ಷಾ ಅಕ್ರಮವನ್ನು ಸಿಐಡಿ ಅಧಿಕಾರಿಗಳು ತನಿಖೆಯ ಮೂಲಕ ಜಾಲಾಡುತ್ತಿದ್ದಾರೆ.