ಪರಿಹಾರ ಹಣ ಅತ್ಯಲ್ಪ, ಕೃಷ್ಣಬೈರೇಗೌಡ ಅಸಮಾಧಾನ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಏ.೨೭:ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರವಾಗಿ ಅಲ್ಪ ಪ್ರಮಾಣದ ಹಣ ಕೊಟ್ಟು ಮಲತಾಯಿ ಧೋರಣೆ ತೋರಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅಸಮಾಧಾನ ಹೊರ ಹಾಕಿದ್ದಾರೆ.ಕೇಂದ್ರ ಸರ್ಕಾರ ರಾಜ್ಯಕ್ಕೆ ೩,೪೫೪ ಕೋಟಿ ಬರ ಪರಿಹಾರ ಬಿಡುಗಡೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಕೇಂದ್ರಕ್ಕೆ ನಾವು ೧೮ ಸಾವಿರ ಕೋಟಿ ರೂ. ಪರಿಹಾರಕ್ಕೆ ಮನವಿ ಮಾಡಿದ್ದೆವು. ಆದರೆ, ಈಗ ೩,೪೫೪ ಕೋಟಿ ರೂ. ಹಣ ಕೊಟ್ಟು ಮಲತಾಯಿ ಧೋರಣೆ ಮಾಡಿದ್ದಾರೆ ಎಂದು ದೂರಿದರು.
ಕೇಂದ್ರಸರ್ಕಾರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಪತ್ರ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಇನ್ನು ಯಾವುದೇ ಅಧಿಕೃತವಾಗಿ ಈ ಬಗ್ಗೆ ದೃಢೀಕರಣ ಬಂದಿಲ್ಲ. ಅಧಿಕೃತ ಆದೇಶದ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದರು.ರಾಜ್ಯದಲ್ಲಿ ಬರ ಪರಿಸ್ಥಿತಿ ಭೀಕರವಾಗಿದೆ. ಹಾಗಾಗಿಯೇ ೪ ತಿಂಗಳ ಹಿಂದೆಯೇ ನಾವು ಪರಿಹಾರ ಬಿಡುಗಡೆಗೆ ಮನವಿ ಮಾಡಿದ್ದೆವು. ೪ ತಿಂಗಳು ಕೇಂದ್ರ ಸರ್ಕಾರ ನಾವು ನೀಡಿದ್ದ ಪತ್ರದ ಮೇಲೆ ಕುಳಿತಿತ್ತು. ನಮ್ಮ ಮನವಿಗೆ ಬೆಲೆ ಕೊಡಲಿಲ್ಲ ಎಂದು ಟೀಕಿಸಿದರು.
ಕೇಂದ್ರ ಸರ್ಕಾರ ರಾಜ್ಯದ ಮನವಿಗೆ ಗೌರವ ಕೊಡದ ಕಾರಣ ನಾವು ನ್ಯಾಯಾಲಯದ ಮೆಟ್ಟಿಲೇರಿ ಕಾನೂನಿನ ಹೋರಾಟ ಮಾಡಬೇಕಾದಂತಹ ಪರಿಸ್ಥಿತಿ ಸೃಷ್ಟಿಯಾಯಿತು. ಕಾನೂನು ಹೋರಾಟದ ಮೂಲಕವೇ ನಮಗೆ ಈಗ ಬರ ಪರಿಹಾರದ ಹಣ ಬಂದಂತಾಗಿದೆ ಎಂದು ಅವರು ಹೇಳಿದರು.