ಪರಿಹಾರ ವಿಳಂಬ: ವಕೀಲ ಕೆ.ಜಿ ಪೂಜಾರಿ ಆಕ್ರೋಶ

ಅಫಜಲಪುರ:ನ.19: ತಾಲೂಕಿನ ಭೀಮಾ ಮತ್ತು ಬೋರಿ ನದಿಗಳಿಗೆ ಪ್ರವಾಹ ಬಂದು ನದಿ ತೀರದ ಹಳ್ಳಿಗಳ ಜನರ ಆಸ್ತಿ-ಪಾಸ್ತಿ, ರೈತರ ಬೆಳೆಗಳು, ಅಪಾರ ಪ್ರಮಾಣದಲ್ಲಿ ಸಾವಿರಾರು ಕೋಟಿ ಹಾನಿಯಾದರೂ ಸರಕಾರ ಪರಿಹಾರ ಕೊಡದೆ ವಿಳಂಬ ನೀತಿ ಅನುಸರಿಸುವುದನ್ನು ಬಿಟ್ಟು, ಶೀಘ್ರ ಪರಿಹಾರ ಕೊಡಬೇಕೆಂದು ಹಿರಿಯ ವಕೀಲ, ತಾಲೂಕಾ ಜೆ.ಡಿ.ಎಸ್ ಮಾಜಿ ಅಧ್ಯಕ್ಷ ಕೆ.ಜಿ ಪೂಜಾರಿ ಒತ್ತಾಯಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಪ್ರವಾಹದಿಂದ ತಾಲೂಕಿನ ನದಿ ತೀರದ ಹಳ್ಳಿಗಳಾದ ಶಿವೂರ, ಶೇಷಗಿರಿವಾಡಿ, ಹೊಸೂರ, ಮಣ್ಣೂರ, ಕುಡಿಗನೂರ, ಉಡಚಾಣ, ಭೋಸಗಾ, ದುದ್ದುಣಗಿ, ಹಿರಿಯಾಳ, ಮಂಗಳೂರ, ಅಳ್ಳಗಿ, ತೆಲ್ಲೂಣಗಿ, ದಿಕ್ಸಂಗಾ, ನಂದರಗಾ, ಗೌರ, ಬಂಕಲಗಾ, ಸೊನ್ನ, ಶಿರವಾಳ, ಶಿವಪೂರ, ಬನ್ನೆಟ್ಟಿ, ಘತ್ತರಗಾ, ಹಿಂಚಗೇರಾ, ಕೊಳ್ಳೂರ, ಗುಡ್ಡೇವಾಡಿ, ಬಟಗೇರಾ, ತೆಲ್ಲೂರ, ದೇವಲ್ ಗಾಣಗಾಪೂರ, ಬಂದರವಾಡ, ತೆಗ್ಗೆಳ್ಳಿ, ಶಿರಸಗಿ, ಚಿನ್ಮಳ್ಳಿ ಸೇರಿದಂತೆ ಹಲವಾರು ಗ್ರಾಮಗಳಿಗೆ ನೀರು ನುಗ್ಗಿ ದೊಡ್ಡ ಪ್ರಮಾಣದಲ್ಲಿ ಹಾನಿಯಾದರೂ ಜನಪ್ರತಿನಿಧಿಗಳು ಶಾಸಕ ಎಂ.ವೈ.ಪಾಟೀಲರು ಕೇವಲ ಫೋಟೋ ಪೋಜ್ ನೀಡಿ ಹೋಗಿದ್ದು, ಅಲ್ಲದೆ ಕಾಟಾಚಾರಕ್ಕೆ ಎಂಬಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ವೈಮಾನಿಕ ಸಮೀಕ್ಷೆ ನಡೆಸಿದರು. ಅಲ್ಲದೆ ಕಂದಾಯ ಸಚಿವ ಆರ್.ಅಶೋಕ ಅವರು ಬಂದು ಭರಿ ಪ್ರವಾಹ ವೀಕ್ಷಣೆ ಮಾಡಿ ಹೊರಟು ಹೋದರು ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ ಕೆ.ಜಿ ಪೂಜಾರಿ ಹೈದ್ರಾಬಾದ ಕರ್ನಾಟಕ ಎನ್ನುವ ಹೆಸರು ತೆಗೆದು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದರೆ ಕಲ್ಯಾಣ ಆಗುವುದಿಲ್ಲ ಎನ್ನುವುದು ಬಿಜೆಪಿ ನಾಯಕರು ಅರಿತುಕೊಳ್ಳಬೇಕು. ಮೊದಲು ಈ ಭಾಗದ ಜನರ ಕಷ್ಟಗಳಿಗೆ, ಅವರ ಬೇಡಿಕೆಗಳಿಗೆ ಸ್ಪಂದಿಸಿ ವಿದ್ಯುತ್, ಶಿಕ್ಷಣ, ಆರೋಗ್ಯ, ಮೂಲ ನಾಗರೀಕ ಸೌಲಭ್ಯಗಳ ಕಡೆ ಗಮನ ಹರಿಸಿ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಪಡಿಸಿ ಎಂದು ಹೇಳಿದ ಅವರು, ನಿಮ್ಮನ್ನು ನಂಬಿಕೊಂಡು ಈ ಭಾಗದ ಜನತೆ ಅಧಿಕಾರ ಕೊಟ್ಟಿದ್ದಾರೆ. ಅವರ ಋಣದಲ್ಲಿದ್ದ ನೀವು ಮೊದಲು ಋಣ ತೀರಿಸಿ ಕೇವಲ ನಗರಗಳಲ್ಲಿ ಕುಳಿತುಕೊಂಡು ಪತ್ರಿಕಾಗೋಷ್ಠಿ ನಡೆಸುವ ಮೂಲಕ ಜನರಿಗೆ ಸುಳ್ಳು ಭರವಸೆ ಕೊಡುವುದನ್ನು ಕೈ ಬಿಡುವಂತೆ ಆಗ್ರಹ ಪಡಿಸಿದರು.

ಹಿಂದೆಂದೂ ಬರದಂತಹ ಪ್ರವಾಹ ಈ ಬಾರಿ ಬಂದಿದ್ದರಿಂದ ಕೋಟ್ಯಾಂತರ ಬೆಳೆ ಹಾನಿಯಾಗಿದೆ. ಪದೇ ಪದೇ ಪ್ರವಾಹದಿಂದ ನಡುಗಡ್ಡೆಯಾಗಿ ರಸ್ತೆ ಸಂಪರ್ಕ ಕಳೆದುಕೊಂಡು ಸಂಕಷ್ಟ ಎದುರಿಸುವ ಹಳ್ಳಿಗಳ ಸಮೀಕ್ಷೆ ನಡೆಸಿ ಶಾಶ್ವತ ಸ್ಥಳಾಂತರಿಸುವ ಯೋಜನೆ ರೂಪಿಸುವಂತೆ ಸಲಹೆ ನೀಡಿದರು.

ತಾಲೂಕಿನ ಸುಪ್ರಸಿದ್ಧ ಸುಕ್ಷೇತ್ರಗಳಾದ ಶ್ರೀ. ದತ್ತಾತ್ರೇಯ ದೇವಸ್ಥಾನ ಹಾಗೂ ಘತ್ತರಗಾ ಭಾಗ್ಯವಂತಿ, ನೀಲೂರಿನ ಮಹಿಬೂಬ ಸುಬಾನಿ ದರ್ಗಾ ಇದ್ದು, ಈ ದೇವಸ್ಥಾನಗಳಿಗೆ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ಮೂಲೆ, ಮೂಲೆಗಳಿಂದ ಸಾವಿರಾರು ಭಕ್ತರು ದಿನನಿತ್ಯ ದರುಶನಕ್ಕೆ ಆಗಮಿಸುತ್ತಾರೆ. ಬರುವ ಭಕ್ತರಿಗೆ ಈವರೆಗೂ ಉತ್ತಮ ಗುಣಮಟ್ಟದ ವಸತಿ ಗೃಹ, ಸ್ನಾನಗೃಹ, ಶೌಚಾಲಯಗಳಿಲ್ಲ. ವಾಹನ ನಿಲುಗಡೆ ಪಾರ್ಕಿಂಗ್ ವ್ಯವಸ್ಥೆಯಿಲ್ಲ. ಬಂದ ಭಕ್ತರು ದಿನದ ನೈಸರ್ಗಿಕ ಚಟುವಟಿಕೆಗಳು ನದಿ ದಡದಲ್ಲಿಯೇ ಮಾಡಿಕೊಳ್ಳುತ್ತಾರೆ. ಹೀಗಾಗಿ ನದಿ ಪಾತ್ರ ತಿಪ್ಪೆಗುಂಡಿಯಾಗಿ ಗಬ್ಬು ವಾಸನೆ ಹರಡಿ ಸಾಂಕ್ರಾಮಿಕ ರೋಗ ಹರಡುತ್ತಲಿದೆ. ದೇವಸ್ಥಾನಗಳ ಎಲ್ಲೊಂದರಲ್ಲಿ ಆಹಾರ ಪದಾರ್ಥಗಳು, ತಿಂಡಿ ತಿನಿಸುಗಳು ಎಸೆಯುವುದರಿಂದ ಕಸದ ರಾಶಿ ಎಲ್ಲೊಂದರಲ್ಲಿ ಬಿದ್ದಿರುತ್ತದೆ. ಸ್ವಚ್ಛತೆ ಕಡೆ ದೇವಸ್ಥಾನದ ಆಡಳಿತ ಮಂಡಳಿ ಗಮನ ಹರಿಸುವುದಿಲ್ಲ ಎಂದು ತಮ್ಮ ಅಸಮಾಧಾರ ಹೊರ ಹಾಕಿದ ಅವರು, ದೇವಸ್ಥಾನಕ್ಕೆ ಬರುವ ಭಕ್ತರ್ಯಾರು ಬರೆಗೈಯಲ್ಲಿ ಹೋಗುವುದಿಲ್ಲ. ದೇವಸ್ಥಾನದ ಹುಂಡಿಗೆ ಕಾಣಿಕೆ ಹಾಕಿ ಹೋಗುತ್ತಾರೆ. ಭಕ್ತರಿಂದ ಪ್ರತಿ ವರ್ಷ ಹಣ ಕಾಣಿಕೆ ರೂಪವಾಗಿ ಹರಿದು ಬಂದರೂ ದೇವಸ್ಥಾನಗಳು ಮಾತ್ರ ಅಭಿವೃದ್ಧಿಯಾಗುತ್ತಿಲ್ಲ ಏಕೆ? ಎಂದು ಪ್ರಶ್ನಿಸಿದ ಅವರು, ಅಭಿವೃದ್ಧಿ ಮಾಡಬೇಕೆನ್ನುವ ಮನಸ್ಸುಗಳ ಕೊರತೆ ಎದ್ದು ಕಾಣುತ್ತದೆ ಎಂದು ದೂರಿದರು.

ಈ ಕೂಡಲೇ ಗಮನ ಹರಿಸಿ ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಸರಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.